ನ್ಯಾಯಾಲಯದ ವಕೀಲರು ಮತ್ತು ಸಿಬ್ಬಂದಿಯ ಮಕ್ಕಳ ಪಾಲನೆಗಾಗಿ ಬಾಂಬೆ ಹೈಕೋರ್ಟ್‌ಗೆ ನವೀಕೃತ ಡೇ ಕೇರ್ ಕೇಂದ್ರ ದೊರೆತಿದೆ.
ಡೇ ಕೇರ್ ಕೇಂದ್ರ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ತೆರೆದಿರಲಿದ್ದು ನಾಮಮಾತ್ರ ಶುಲ್ಕವನ್ನಷ್ಟೇ ಪಾವತಿಸಿ ಅದರ ಸೇವೆಗಳನ್ನು ಹೈಕೋರ್ಟ್ ವಕೀಲರು ಮತ್ತು ಸಿಬ್ಬಂದಿ ಪಡೆಯಬಹುದಾಗಿದೆ.
ಹೈಕೋರ್ಟ್ ಕಟ್ಟಡದ ಪಕ್ಕದಲ್ಲಿ ಮುಂಬೈನ ಫೋರ್ಟ್ ಪ್ರದೇಶದಲ್ಲಿರುವ ಸೆಂಟ್ರಲ್ ಟೆಲಿಗ್ರಾಫ್ ಆಫೀಸ್ (CTO) ಕಟ್ಟಡದ ನೆಲ ಮಹಡಿಯಲ್ಲಿ ಈ ಕೇಂದ್ರ ಇದೆ. ಕೇಂದ್ರವನ್ನು ಏಪ್ರಿಲ್ 2, 2024 ರಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಉದ್ಘಾಟಿಸಿದರು.
ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ಅವರು ಪರಿಕಲ್ಪನೆ ಮತ್ತು ವಿನ್ಯಾಸದ ಪ್ರಕಾರ ನವೀಕೃತ ಶಿಶುವಿಹಾರ ರೂಪುಗೊಂಡಿದೆ. ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಕಟ್ಟಡದ ಕಾಮಗಾರಿಯ ಜವಾಬ್ದಾರಿ ಹೊತ್ತಿತ್ತು.
ಹೈಕೋರ್ಟ್ ಪ್ರಧಾನ ಪೀಠದ ವಕೀಲರ ಸಂಘಗಳ ಸದಸ್ಯರ ಮಕ್ಕಳು ಹಾಗೂ ಮಿನಿಸ್ಟೀರಿಯಲ್ ಕೋರ್ಟ್‌ನ ಸಿಬ್ಬಂದಿಗೆ ಈ ಸೌಲಭ್ಯ ಒದಗಿಸಲಾಗಿದೆ. ಶಿಶುಪಾಲನಾ ಕೇಂದ್ರದಲ್ಲಿ 1 ರಿಂದ 8 ವರ್ಷದೊಳಗಿನ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಡೇ ಕೇರ್ ಕೇಂದ್ರವನ್ನು ಈ ಹಿಂದೆ 2017ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಉದ್ಘಾಟಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಮುಚ್ಚಲಾಗಿದ್ದ ಈ ಕೇಂದ್ರ ತಾತ್ಕಾಲಿಕವಾಗಿ ಹೈಕೋರ್ಟ್ ದಾಖಲೆಗಳ ಸಂಗ್ರಹ ಕೇಂದ್ರವಾಗಿತ್ತು. ಈ ತಿಂಗಳ ಆರಂಭದಲ್ಲಿ ಇದನ್ನು ನವೀಕರಿಸಲಾಯಿತು.