ಪುತ್ರ ಸಂತಾನಕ್ಕೆ ಸಮ ಸಂಖ್ಯೆ ಸೂತ್ರ: ನಿವೃತ್ತಿ ಮಹಾರಾಜ್‌ ವಿರುದ್ಧದ ಪ್ರಕರಣ ಮರುಸ್ಥಾಪನೆ

ನಿವೃತ್ತಿ ಮಹಾರಾಜ್‌ ಅವರ ಭಾಷಣವು ಪಿಸಿಪಿಎನ್‌ಡಿಟಿ ಕಾಯಿದೆ ಅಡಿ ಲಿಂಗ ಪತ್ತೆ ಕುರಿತ ಪ್ರಚಾರ ಎನಿಸಿಕೊಳ್ಳಲಿದೆ ಎಂದಿರುವ ಹೈಕೋರ್ಟ್‌ ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
Aurangabad Bench, Bombay High Court
Aurangabad Bench, Bombay High Court

ಗಂಡು ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಸಮ ಸಂಖ್ಯೆಯ ದಿನದಂದು ಕೂಡಬೇಕು ಎಂದಿದ್ದ ಕೀರ್ತನಕಾರರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದ್ದ ಸತ್ರ ನ್ಯಾಯಾಲಯವೊಂದರ ಆದೇಶವನ್ನು ಬದಿಗೆ ಸರಿಸಿರುವ ಬಾಂಬೆ ಹೈಕೋರ್ಟ್‌ನ ಔರಂಗಬಾದ್‌ ಪೀಠವು ಅವರ ವಿರುದ್ಧದ ಪ್ರಕರಣವನ್ನು ಮರುಸ್ಥಾಪಿಸಿದೆ.

ಮೌಢ್ಯ ವಿರೋಧಿ ಸಂಘಟನೆ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸದಸ್ಯರಾದ ರಂಜನಾ ಪಗರ್‌ ಗಾವಂಡೆ ದೂರು ಆಧರಿಸಿ ಪಿಸಿಪಿಎನ್‌ಡಿಟಿ ಕಾಯಿದೆ ಅಡಿ ಕೀರ್ತನಕಾರ ಕಾಶಿನಾಥ್‌ ದೇಶಮುಖ್‌-ಇಂದೋರಿಕರ್‌ ಅಲಿಯಾಸ್‌ ನಿವೃತ್ತಿ ಮಹಾರಾಜ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಸತ್ರ ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಗಾವಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕಿಶೋರ್‌ ಸಂತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಗಂಡು ಮಗುವಿನ ಗರ್ಭಧಾರಣೆ ಹೇಗೆ ಎಂಬುದರ ಕುರಿತು ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಮಾಡುವುದು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಕಾಯಿದೆ (ಪಿಸಿಪಿಎನ್‌ಡಿಟಿ) ಅಡಿ ಅಪರಾಧವಾಗಿದೆ ಎಂದಿರುವ ನ್ಯಾಯಾಲಯವು ತನ್ನ ಭಾಷಣವು ಶೈಕ್ಷಣಿಕ ಉದ್ದೇಶ ಹೊಂದಿತ್ತು ಎಂಬ ಕೀರ್ತನಕಾರ ನಿವೃತ್ತಿ ಅವರ ಅವರ ವಾದವನ್ನು ಒಪ್ಪಲು ನಿರಾಕರಿಸಿದೆ.

“ಶೈಕ್ಷಣಿಕ ದೃಷ್ಟಿಯಿಂದ ಪುಸ್ತಕ ರಚಿಸುವುದನ್ನು ಹಾಲಿ ಪ್ರಕರಣದಲ್ಲಿ ಆರೋಪಿಸಿರುವುದಕ್ಕೆ ಹೋಲಿಕೆ ಮಾಡಲಾಗದು. ಜ್ಞಾನ ಸಂಪಾದನೆ ಮತ್ತು ಅದರ ಹಂಚಿಕೆಯನ್ನು ಅದನ್ನು ಬಯಸುವ ಜನರಿಗೆ ನಿರ್ದಿಷ್ಟ ವಿಧಾನದ ಮೂಲಕ ರವಾನಿಸಬೇಕು. ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೆ ಎಂಬುದು ಆರೋಪಿಯ ವಾದದಲ್ಲಿ ಹುರುಳಿಲ್ಲ ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಈ ನೆಲೆಯಲ್ಲಿ ಸತ್ರ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ. ಕೀರ್ತನಕಾರರು ಪವಿತ್ರ ಹಾಡುಗಳು ಮತ್ತು ಸ್ತುತಿಗೀತೆಗಳ ರಚನಾಕಾರರಾಗಿದ್ದಾರೆ, ಸಾರ್ವಜನಿಕವಾಗಿ ಪ್ರಖರವಾಗಿ ಭಾಷಣ ಮಾಡುವವರಾಗಿದ್ದಾರೆ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಮೇಲೆ ಇವರು ಪ್ರಭಾವ ಹೊಂದಿದ್ದಾರೆ. ವೃತ್ತಿಪರ ಕೀರ್ತನಕಾರರಾದ ನಿವೃತ್ತಿ ಕಾಶಿನಾಥ್‌ ದೇಶಮುಖ್‌-ಇಂದೋರಿಕರ್‌ ಅಲಿಯಾಸ್‌ ನಿವೃತ್ತಿ ಮಹರಾಜ್‌ ಅವರು ಅಹ್ಮದ್‌ನಗರ ಜಿಲ್ಲೆಯ ಸಂಗಮ್ನಾರ್‌ನಲ್ಲಿ 2020ರ ಜನವರಿ 4ರಂದು ಮಾಡಿದ್ದ ಸಾರ್ವಜನಿಕ ಭಾಷಣ ವಿವಾದದ ಕೇಂದ್ರವಾಗಿತ್ತು.

ಧಾರ್ಮಿಕ ಪುಸ್ತಕಗಳು ಮತ್ತು ಆಯುರ್ವೇದದ ಕುರಿತಾದ ಪುಸ್ತಕಗಳನ್ನು ಉಲ್ಲೇಖಿಸಿ ಗಂಡು ಮಗುವಿನ ಗರ್ಭ ಧರಿಸಲು ಅಗತ್ಯವಿರುವ ತಂತ್ರಗಳ ಬಗ್ಗೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಸಮ ಸಂಖ್ಯೆಯ ದಿನಾಂಕದಂದು ದಂಪತಿ ಸಂಭೋಗಿಸಿದರೆ ಗಂಡು ಮಗು, ಬೆಸ ಸಂಖ್ಯೆ ದಿನಾಂಕದಂದು ಸೇರಿದರೆ ಹೆಣ್ಣು ಮಗು ಜನಿಸಲಿದೆ ಎಂದಿದ್ದರು. ಅಶುಭ ದಿನದಂದ ಸೇರಿದರೆ ಹುಟ್ಟುವ ಮಗು ಕುಟುಂಬದ ಹೆಸರನ್ನು ಮಣ್ಣು ಪಾಲು ಮಾಡಲಿದೆ. ಆರು ತಿಂಗಳ ಬಳಿಕ ಭ್ರೂಣವು ಬಲಕ್ಕೆ ತಿರುಗಿದರೆ ಅದು ಗಂಡು ಮಗು, ಎಡಕ್ಕೆ ತಿರುಗಿದರೆ ಹೆಣ್ಣು ಮಗು ಜನಿಸಲಿದೆ ಎಂದಿದ್ದ ಭಾಷಣವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಕೂಡ ಮಾಡಲಾಗಿತ್ತು.

ರಂಜನಾ ಪಗರ್‌ ಗವಾಂಡೆ ಅವರು ಈ ವಿವಾದಾತ್ಮಕ ಭಾಷಣದ ಬಗ್ಗೆ ಆಕ್ಷೇಪಿಸಿದ್ದರು. ಅವರ ಮನವಿ ಆಧರಿಸಿ ಸರ್ಕಾರದ ಪ್ರಾಧಿಕಾರವು ಕೀರ್ತನಕಾರ ನಿವೃತ್ತಿ ಅವರ ವಿರುದ್ಧ ಪಿಸಿಪಿಎನ್‌ಡಿಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು.

Kannada Bar & Bench
kannada.barandbench.com