ದಾವೂದಿ ಬೋಹ್ರಾ ಸಮುದಾಯದ ಕಾನೂನುಬದ್ಧ ನಾಯಕ ಮುಫದ್ದಲ್ ಸೈಫುದ್ದೀನ್: ಬಾಂಬೆ ಹೈಕೋರ್ಟ್ ತೀರ್ಪು

ಸೈಫುದ್ದೀನ್ ನಾಯಕತ್ವ ಪ್ರಶ್ನಿಸಿ ಸಲ್ಲಿಸಿದ್ದ 9 ವರ್ಷಗಳ ಹಿಂದಿನ ದಾವೆಯನ್ನು ಹೈಕೋರ್ಟ್ ವಜಾಗೊಳಿಸಿತು.
Bombay High Court
Bombay High Court

ಇಸ್ಲಾಂ ಧರ್ಮಕ್ಕೆ ಸೇರಿದ ಷಿಯಾ ಪಂಥದ ಪಂಗಡವಾದ ದಾವೂದಿ ಬೊಹ್ರಾ ಸಮುದಾಯದ 53ನೇ  ಪ್ರಸ್ತುತ ಧಾರ್ಮಿಕ ನಾಯಕ ಮುಫದ್ದಲ್ ಸೈಫುದ್ದೀನ್ ಅವರೇ ಸಮುದಾಯದ ನಿಜವಾದ ನಾಯಕ ಎಂದು ಮಂಗಳವಾರ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ ಅವರ ನಾಯಕತ್ವ ಪ್ರಶ್ನಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸಿದೆ [ತಾಹೆರ್ ಫಕ್ರುದ್ದೀನ್ ಸಾಹೇಬ್ ಮತ್ತು ಮುಫದ್ದಲ್ ಬುರ್ಹಾನುದ್ದೀನ್ ಸೈಫುದ್ದೀನ್ ನಡುವಣ ಪ್ರಕರಣ].

ತಾಹೆರ್ ಫಕ್ರುದ್ದೀನ್ ಅವರು ಸೈಯದ್ನಾ (ಸಮುದಾಯದ ನಾಯಕ) ಅವರ ನೇಮಕಾತಿ ಪ್ರಶ್ನಿಸಿದ್ದರಾದರೂ ಅದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದ ನ್ಯಾ. ಗೌತಮ್‌ ಪಟೇಲ್‌ ಅವರಿದ್ದ ಏಕಸದಸ್ಯ ಪೀಠ  9 ವರ್ಷಗಳ ಹಿಂದಿನ ದಾವೆಯನ್ನು ವಜಾಗೊಳಿಸಿತು.

ಅಲ್ಲದೆ, ಪ್ರಸ್ತುತ ನಾಯಕನಿಗೆ ಹಿಂದಿನ ನಾಯಕ ವಿಧಿಬದ್ಧವಾಗಿ 'ನಾಸ್‌ʼ (ಉತ್ತರಾಧಿಕಾರ ಪ್ರದಾನ ವಿಧಿ) ಪ್ರದಾನಿಸಿದ್ದರು ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ಮೊಕದ್ದಮೆಯಲ್ಲಿ ಪ್ರಾರ್ಥಿಸಲಾದ ಪರಿಹಾರಗಳನ್ನು ಮಹಾರಾಷ್ಟ್ರ ಸಾರ್ವಜನಿಕ ಟ್ರಸ್ಟ್ ಕಾಯಿದೆ 1950ರ ನಿಬಂಧನೆಗಳಿಂದ ನಿರ್ಬಂಧಿಸಲಾಗಿಲ್ಲ. ಆದರೆ, ಫಿರ್ಯಾದಿ ತಾಹೆರ್ ಫಕ್ರುದ್ದೀನ್ ಅವರಿಗೆ ತಮಗೆ ವಿಧಿಬದ್ಧವಾಗಿ 'ನಾಸ್' ಪ್ರದಾನಿಸಲಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾ. ಪಟೇಲ್‌ ತಿಳಿಸಿದರು.

ಒಮ್ಮೆ 'ನಾಸ್' ನೀಡಿದ ಮೇಲೆ ಹಿಂಪಡೆಯಲು ಇಲ್ಲವೇ ಬದಲಿಸಲು ಇಲ್ಲವೇ ರದ್ದುಗೊಳಿಸಲು ಸಾಧ್ಯವಿಲ್ಲವೇ ಎಂಬುದನ್ನು ಫಿರ್ಯಾದಿಗೆ ಸಾಬೀತುಪಡಿಸಲು ಆಗಿಲ್ಲ ಎಂದ ನ್ಯಾಯಮೂರ್ತಿಗಳು ಮೊಕದ್ದಮೆ ವಜಾಗೊಳಿಸಿದರು.  

2014 ರಲ್ಲಿ 52 ನೇ ನಾಯಕರಾಗಿದ್ದ ತಮ್ಮ 'ಸಯ್ಯದ್ನಾ' ನಿಧನಾನಂತರ ದಾವೂದಿ ಬೋಹ್ರಾ ಸಮುದಾಯದಲ್ಲಿ ಬಂಡಾಯವೊಂದು ತಲೆ ಎತ್ತಿತು. ಅವರ ನಿಧನದ ನಂತರ ಅವರ ಪುತ್ರ ಮುಫದ್ದಲ್ ಸೈಫುದ್ದೀನ್ 53 ನೇ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇದನ್ನು ಮೃತ ಸೈಯದ್ನಾ ಅವರ ಮಲ ಸಹೋದರ ಖುಝೈಮಾ ಕುತುಬುದ್ದೀನ್ ಪ್ರಶ್ನಿಸಿದರು. ಸಮುದಾಯದ 52ನೇ ನಾಯಕರಾಗಿದ್ದ ಸೈಯದ್ನಾ ಮೊಹಮ್ಮದ್‌ ಬುರ್ಹಾನುದ್ದೀನ್ ಅವರು ತನಗೆ ರಹಸ್ಯ ʼನಾಸ್‌ʼ (ಉತ್ತರಾಧಿಕಾರ ಪ್ರದಾನ ವಿಧಿ) ನೀಡಿರುವುದರಿಂದ ತಾನೇ 'ದಾಯ್-ಅಲ್-ಮುತ್ಲಾಕ್' (ಸಮುದಾಯದ ನಾಯಕ) ಎಂದು ಹೇಳಿಕೊಂಡಿದ್ದರು. ವಿವಾದ ಇತ್ಯರ್ಥವಾಗದೇ ಇದ್ದಾಗ ಮೂಲ ಫಿರ್ಯಾದಿ ಕುತುಬುದ್ದೀನ್ ಅವರು 2014ರ ಮಾರ್ಚ್ 29ರಂದು ಹೈಕೋರ್ಟ್‌ನಲ್ಲಿ ದಾವೆ ಹೂಡಿ, ತನ್ನನ್ನು 53ನೇ ನಾಯಕನನ್ನಾಗಿ ಘೊಷಿಸುವಂತೆ ಮನವಿ ಮಾಡಿದ್ದರು.

ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲೀಕರಣ ಪ್ರಕ್ರಿಯೆ ನಡೆಯುತ್ತಿದ್ದಾಗಲೇ 2016ರಲ್ಲಿ, ಮೂಲ ಫಿರ್ಯಾದಿ ಕುತುಬುದ್ದೀನ್‌ ನಿಧನರಾದರು. ಬಳಿಕ ಅವರ ಮಗ ತಾಹೆರ್ ಫಕ್ರುದ್ದೀನ್ ಅವರು ತಮ್ಮ ತಂದೆಯ ಬದಲು ಪ್ರಕರಣದ ಫಿರ್ಯಾದಿಯಾದರು. 9 ವರ್ಷ ಮತ್ತು 8 ದಿನಗಳ ಕಾಲ ನಡೆದ ವಿಚಾರಣೆಯ ಬಳಿಕ ಏಪ್ರಿಲ್ 5, 2023ರಂದು ನ್ಯಾ. ಜಿ ಎಸ್‌ ಪಟೇಲ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತು.

 ತನ್ನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ 52ನೇ ನಾಯಕರು ವಿಷಯವನ್ನು ಗೌಪ್ಯವಾಗಿಡುವಂತೆ ಕೇಳಿಕೊಂಡರು. ಅವರ ನಿಧನಾನಂತರ ಅವರ ಮಗ ಸೈಫುದ್ದೀನ್ ವಂಚನೆಯಿಂದ ಹುದ್ದೆ ಅಲಂಕರಿಸಿದ್ದು ಇದರಿಂದ ಕಾನೂನು ಹಕ್ಕು ಚಲಾಯಿಸುವಂತಾಯಿತು ಎಂದು ಮೂಲ ದಾವೆದಾರರಾದ ದಿ. ಕುತುಬುದ್ದೀನ್‌ ಮೊಕದ್ದಮೆಯಲ್ಲಿ ತಿಳಿಸಿದ್ದರು.

ಲಂಡನ್‌ನ ಆಸ್ಪತ್ರೆಯಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ನನ್ನ ತಂದೆಯಾದ ದಿವಂಗತ 52ನೇ ನಾಯಕರು ನನಗೇ ನಾಸ್‌ ಪ್ರದಾನ ಮಾಡಿದ್ದರು. ಜೂನ್ 20, 2011ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನು ಸಾರ್ವಜನಿಕವಾಗಿ 'ಮರು-ದೃಢೀಕರಿಸಲಾಯಿತು' ಎಂದು ಪ್ರಕರಣದ ಪ್ರತಿವಾದಿ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com