ದತ್ತಿ ಮತ್ತು ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಅನಾಮಧೇಯ ದೇಣಿಗೆಗಳ ಮೇಲಿನ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಅರ್ಹವಾಗಿದೆ ಎಂಬ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಆದೇಶವನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಆದಾಯ ತೆರಿಗೆ ಆಯುಕ್ತರು ಮತ್ತು ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ನಡುವಣ ಪ್ರಕರಣ].
ಐಟಿಎಟಿಯ ತೀರ್ಪು ವಿರೋಧಿಸಿ ಮುಂಬೈನಲ್ಲಿ ಆದಾಯ ತೆರಿಗೆ (ವಿನಾಯಿತಿ) ಆಯುಕ್ತರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತು.
ಐಟಿ ಕಾಯಿದೆಯ ಸೆಕ್ಷನ್ 115BBC (11)ರ ಪ್ರಕಾರ 2015ರಿಂದ 2019ರವರೆಗೆ ಟ್ರಸ್ಟ್‌ನ ಹುಂಡಿ ಮೂಲಕ ಸಂಗ್ರಹಿಸಲಾದ ಸಂಗ್ರಹಿಸಲಾದ ಒಟ್ಟು ₹159.12 ಕೋಟಿ ಅನಾಮಧೇಯ ದೇಣಿಗೆಯು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಕಾಯಿದೆಯ ಸೆಕ್ಷನ್ 115BBC (1) ಕೆಲವು ಸಂದರ್ಭಗಳಲ್ಲಿ ಟ್ರಸ್ಟ್‌ಗಳಿಗೆ ಅನಾಮಧೇಯ ದೇಣಿಗೆಗೆ ತೆರಿಗೆ ವಿಧಿಸಬಹುದು ಎಂದು ಹೇಳುತ್ತದಾದರೂ, ಸೆಕ್ಷನ್ 115BBC(2)(b) ಪ್ರಕಾರ, ಟ್ರಸ್ಟ್ ಅನ್ನು ಸಂಪೂರ್ಣವಾಗಿ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸ್ಥಾಪಿಸಿದ್ದರೆ ಆಗ ಅಂತಹ ತೆರಿಗೆ ಅನ್ವಯಿಸುವುದಿಲ್ಲ.
1953ರಲ್ಲಿ ಸ್ಥಾಪನೆಯಾದ ಟ್ರಸ್ಟ್ ತನ್ನ ಆದಾಯ ತೆರಿಗೆ ರಿಟರ್ನ್‌ನಲ್ಲಿ ತೆರಿಗೆಗೆ ಒಳಪಡುವ ಆದಾಯ ತನ್ನ ಬಳಿ ಇಲ್ಲ ಎಂದು ಘೋಷಿಸಿತ್ತು.
ಆದರೆ ಆದಾಯ ತೆರಿಗೆಯ ಉಪ ಆಯುಕ್ತರು ಟ್ರಸ್ಟ್‌ನಿಂದ ಅನಾಮಧೇಯ ದೇಣಿಗೆಯಾಗಿ ಸ್ವೀಕರಿಸಿದ ₹159.12 ಕೋಟಿಗಳಿಗೆ ತೆರಿಗೆ ವಿಧಿಸಲು ಪ್ರಯತ್ನಿಸಿದರು. ಕಾಯಿದೆಯ ಕೆಲ ಸೆಕ್ಷನ್‌ಗಳ ಪ್ರಕಾರ ಟ್ರಸ್ಟ್ ಕೇವಲ ದತ್ತಿ ಉದ್ದೇಶಗಳಿಗಾಗಿ ಅಸ್ತಿತ್ವದಲ್ಲಿದೆ. ಆದ್ದರಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪಿಸಿದ ಟ್ರಸ್ಟ್ ಇದು ದತ್ತಿ ಮತ್ತು ಧಾರ್ಮಿಕ ಉದ್ದೇಶಗಳೆರಡನ್ನೂ ಒಳಗೊಂಡಿದೆ ಎಂದು ಅದರ ಒಟ್ಟು ಆದಾಯದ ಕೇವಲ ಶೇ 0.49ರಷ್ಟನ್ನು ಧಾರ್ಮಿಕ ಚಟುವಟಿಕೆಗಳಿಗೆ ಖರ್ಚು ಮಾಡಲಾಗಿದೆ ಎಂದಿತು.
ವಾದಗಳನ್ನು ಆಲಿಸಿದ ನ್ಯಾಯಾಲಯ ಟ್ರಸ್ಟ್ ದತ್ತಿ ಮತ್ತು ಧಾರ್ಮಿಕ ಎರಡೂ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.