
ನ್ಯಾಯಾಲಯ ನೀಡಿದ ವಿವಿಧ ಆದೇಶಗಳನ್ನು ಕಡೆಗಣಿಸಿ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಜೀವನಾಂಶ ನೀಡದ ವೈದ್ಯರೊಬ್ಬರಿಗೆ ಬಾಂಬೆ ಹೈಕೋರ್ಟ್ ಆರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿದೆ [ಡಾ. ಸಂಗೀತಾ ಗನ್ವೀರ್ ಮತ್ತು ಡಾ. ಮನೀಶ್ ಗನ್ವೀರ್ ನಡುವಣ ಪ್ರಕರಣ].
ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಹಲವು ನಿರ್ದೇಶನಗಳನ್ನು ಪಾಲಿಸದೆ ಕುಟುಂಬಕ್ಕೆ ದೀರ್ಘಕಾಲೀನ ತೊಂದರೆ ಉಂಟು ಮಾಡಿರುವ ಕಾರಣಕ್ಕೆ ವೈದ್ಯ ಡಾ. ಮನೀಶ್ ಗನ್ವೀರ್ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಸಿಷಿತು.
ಆದೇಶ ಉಲ್ಲಂಘಿಸಿದವರಿಗೆ ಕಾನೂನಿನ ಬಗ್ಗೆ ಗೌರವ ಇಲ್ಲ. ನ್ಯಾಯಾಲಯ ನೀಡಿದ ಆದೇಶಗಳ ಬಗ್ಗೆಯೂ ಅವರಿಗೆ ಗೌರವ ಇಲ್ಲ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಅದ್ವೈತ್ ಎಂ. ಸೇತ್ನಾ ಅವರಿದ್ದ ಪೀಠವು ವೈದ್ಯನ ನಡೆಯ ಬಗ್ಗೆ ಕಿಡಿಕಾರಿತು.
ವೈದ್ಯರು ನಿಯಮ ಪಾಲಿಸುವುದನ್ನು ತಪ್ಪಿಸಲು ಮಾಡಿದ ಪ್ರಯತ್ನಗಳ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ವೈದ್ಯ ಆದೇಶ ಕಡೆಗಣಿಸಿದ್ದಲ್ಲದೆ ಪತ್ನಿ ಮತ್ತು ತನ್ನ ಹೆಣ್ಣುಮಗಳನ್ನು ಕಾಪಾಡಿಕೊಳ್ಳಬೇಕೆಂಬ ನ್ಯಾಯಯುತ ಮತ್ತು ಸ್ವಾಭಾವಿಕ ಕಾಳಜಿ ಕೂಡ ಇಲ್ಲ ಎಂದು ಜರೆಯಿತು.
ಬಾಂಬೆ ಹೈಕೋರ್ಟ್ 2019 ರಲ್ಲಿ, ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ತಿಂಗಳಿಗೆ ₹35,000 ಜೀವನಾಂಶ ಪಾವತಿಸುವಂತೆ ಪತಿಗೆ ನಿರ್ದೇಶಿಸಿತ್ತು. ಆದರೆ ಪತಿಯು ಆದೇಶ ಪದೇ ಪದೇ ಆದೇಶ ಪಾಲಿಸದೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಮತ್ತು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುವುದನ್ನು ಮುಂದುವರೆಸಿದ್ದರು. ಅವೆಲ್ಲವೂ ತಿರಸ್ಕೃತವೂ ಆಗಿದ್ದವು. ಈ ನಡುವೆ ಪತ್ನಿ ಜುಲೈ 2019ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಪತ್ನಿ ಮತ್ತು ಹೆಣ್ಣುಮಗಳ ಯೋಗಕ್ಷೇಮದ ಬಗ್ಗೆ ಕಾಳಜಿ ಇಲ್ಲದಿರುವುದನ್ನು ಟೀಕಿಸಿದ ಪೀಠ ಕಾನೂನು ಮತ್ತು ನೈತಿಕ ಬಾಧ್ಯತೆಗಳನ್ನು ಪೂರೈಸಲು ಆತ ನಿರಾಕರಿಸಿದ್ದರಿಂದ ಕುಟುಂಬ ಆರು ವರ್ಷ ಕಾಲ ಕಷ್ಟಪಡುವಂತಾಯಿತು ಎಂದಿತು.
ಪತಿ ಪರ ವಕೀಲರು ವಾದ ಮಂಡಿಸಿ ಜೀವನಾಂಶದ ಮೊತ್ತ ತುಂಬಾ ಹೆಚ್ಚಿದ್ದು ಅದನ್ನು ಪಾವತಿಸಲು ವೈದ್ಯ ಅಸಮರ್ಥರಾಗಿರುವುದಕ್ಕೆ ಸೂಕ್ತ ಕಾರಣಗಳಿವೆ ಎಂದು ವಾದಿಸಿದರು. ಆದರೆ, ನ್ಯಾಯಾಲಯ ಈ ವಾದ ತಿರಸ್ಕರಿಸಿತು. ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶನ್ವಯವೇ ಜೀವನಾಂಶ ಆದೇಶ ನೀಡಲಾಗಿದೆ ಎಂದು ಹೇಳಿತು.
ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಪತಿ ಪದೇ ಪದೇ ವಿಫಲರಾಗಿರುವುದು 'ಬಹಿರಂಗ ಪ್ರತಿಭಟನೆ'ಯ ಕೃತ್ಯ ಎಂದ ಪೀಠ ಕಾನೂನು ಆಳ್ವಿಕೆಯನ್ನು ಸ್ಪಷ್ಟವಾಗಿ ನಿರ್ಲಕ್ಷ್ಯ ಮಾಡಿರುವುದನ್ನು ಶಿಕ್ಷಿಸದೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತು. ಅಂತೆಯೇ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಿತು.
ಜೊತೆಗೆ ವಿಚಾರಣೆ ವೇಳೆ ಖುದ್ದು ಹಾಜರಿದ್ದ ಪತಿಯನ್ನು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಶರಣಾಗುವಂತೆ ಮತ್ತು ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]