ಸ್ಟ್ಯಾನ್‌ ಸ್ವಾಮಿ ಅವರ ಸಮಾಜ ಸೇವೆಯ ಬಗ್ಗೆ ಅಪಾರ ಗೌರವವಿದೆ, ಅವರ ಸಾವು ನಿರೀಕ್ಷಿಸಿರಲಿಲ್ಲ: ಬಾಂಬೆ ಹೈಕೋರ್ಟ್‌

ಹೈಕೋರ್ಟ್‌ ಅಥವಾ ಆಸ್ಪತ್ರೆಯ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ಸ್ಟ್ಯಾನ್‌ ಸ್ವಾಮಿ ಪರ ವಕೀಲ ಮಿಹಿರ್‌ ದೇಸಾಯಿ ಸ್ಪಷ್ಟಪಡಿಸಿದ್ದಾರೆ.
Justice SS Shinde and Justice NJ Jamadar, Bombay High Court
Justice SS Shinde and Justice NJ Jamadar, Bombay High Court

ಸಾಮಾಜಿಕ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಅವರ ಸಾವು ಆಘಾತವಾಗಿ ಎರಗಿದ್ದು, ಅದನ್ನು ನಿರೀಕ್ಷಿಸಿರಲಿಲ್ಲ ಎಂದು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಜೆ ಜಾಮದಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಸ್ವಾಮಿ ಅವರು ಕೈಗೊಂಡಿದ್ದ ಕಾರ್ಯದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಅಲ್ಲದೇ, ವಕೀಲ ಮಿಹಿರ್‌ ದೇಸಾಯಿ ಮೂಲಕ ಸ್ವಾಮಿ ಅವರು ಸಲ್ಲಿಸಿದ ಪ್ರತಿಯೊಂದು ಮನವಿಗೂ ನಾವು ಸಮ್ಮತಿಸಿದ್ದೇವೆ ಎಂದು ಪೀಠ ಹೇಳಿದ್ದು, ತಾನು ಭೀಮಾ ಕೋರೆಗಾಂವ್‌ ಪ್ರಕರಣದ ಮತ್ತೊಬ್ಬ ಆರೋಪಿ ವರವರ ರಾವ್‌ ಅವರಿಗೂ ಜಾಮೀನು ನೀಡಿರುವುದಾಗಿ ನೆನಪಿಸಿತು.

ಇದೇ ಪೀಠವು ಡಾ. ವರವರ ರಾವ್‌ ಅವರಿಗೆ ಜಾಮೀನು ನೀಡಿದೆ ಎಂಬುದನ್ನು ಯಾರೂ ಹೇಳುವುದಿಲ್ಲ. ಆಸ್ಪತ್ರೆಯಲ್ಲಿರುವಾಗ ರಾವ್‌ ಅವರನ್ನು ಭೇಟಿ ಮಾಡಲು ಅವರ ಕುಟುಂಬ ಸದಸ್ಯರಿಗೆ ಅನುವು ಮಾಡಿಕೊಟ್ಟಿದ್ದೇವೆ. ನೀವು (ದೇಸಾಯಿ) ಸಲ್ಲಿಸಿದ ಪ್ರತಿಯೊಂದು ಕೋರಿಕೆಗೂ ನಾವು ಸಮ್ಮತಿಸಿದ್ದೇವೆ. ವೈದ್ಯಕೀಯ ಕಾರಣದ ಹಿನ್ನೆಲೆಯಲ್ಲಿ ಸ್ವಾಮಿ ಅವರನ್ನು ಆಸ್ಪತ್ರೆಗೆ ಕಳುಹಿಸುವ ಸಂಬಂಧ ನೀವು ನ್ಯಾಯಾಲಯದ ಕದ ತಟ್ಟಿದಾಗ ನಾವು ಅನುಮತಿಸಿದ್ದೇವೆ” ಎಂದು ಪೀಠ ಹೇಳಿತು.

ನ್ಯಾ. ಶಿಂಧೆ ಅವರು “ಸ್ವಾಮಿ ಅವರ ಸಾವಿನ ಸುದ್ದಿ ಕೇಳಿದಾಗ ನಮಗೂ ಆಘಾತವಾಯಿತು ಮತ್ತು ಏನು ಸಂಭವಿಸಿತೋ ಅದರ ಬಗ್ಗೆ ದುಃಖವಾಯಿತು. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಹೀಗಾಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ನಮಗನ್ನಿಸಿದ್ದನ್ನು ನಾವು ಆದೇಶದಲ್ಲಿ ದಾಖಲಿಸಲಾಗದು. ಆದರೆ, ಅವರ ಸಾವು ನಮಗೆ ಹೇಗೆ ಅನ್ನಿಸಿತು ಎಂಬುದನ್ನು ನಾವು ದಾಟಿಸಲಾಗದು” ಎಂದರು.

ಸಮಯದ ಅಭಾವದಿಂದಾಗಿ ಸುದ್ದಿ ವಾಹಿನಿಗಳನ್ನು ನೋಡುವುದನ್ನು ಮತ್ತು ಪತ್ರಿಕೆಗಳನ್ನು ಓದುವುದನ್ನು ತಪ್ಪಿಸುವುದಾಗಿ ವಕೀಲ ದೇಸಾಯಿ ಅವರಿಗೆ ಹೇಳಿದ ನ್ಯಾಯಮೂರ್ತಿಗಳು ಸ್ವಾಮಿ ಅವರ ಅಂತ್ಯಸಂಸ್ಕಾರದ ದೃಶ್ಯಗಳನ್ನು ವೀಕ್ಷಿಸಿದ್ದಾಗಿ ತಿಳಿಸಿದರು. “ಅಂತ್ಯ ಸಂಸ್ಕಾರದ ಸಮಯ ತಿಳಿದಿತ್ತು. ಹೀಗಾಗಿ ಅದನ್ನು ನೋಡಿದೆ. ಶವ ಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ಮತ್ತು ಸದ್ಭಾವನಾಪೂರ್ವಕವಾಗಿ ನಡೆಸಲಾಯಿತು. ಅದು ಅನುಗ್ರಹಪೂರ್ವಕವಾಗಿತ್ತು ಮತ್ತು ಎಲ್ಲರೂ ಮಾತನಾಡಿದ ರೀತಿ, ತುಂಬಾ ಗೌರವ ಮತ್ತು ಘನತೆಯಿಂದ ಕೂಡಿತ್ತು…” ಎಂದರು.

“ಸಮಾಜದಲ್ಲಿ ಸ್ವಾಮಿ ಅವರು ಕೈಗೊಂಡಿರುವ ಕೆಲಸದ ಬಗ್ಗೆ ನಮಗೆ ಗೌರವವಿದೆ. ಕಾನೂನಾತ್ಮಕವಾಗಿ ನಡೆಯುತ್ತಿರುವ ವಿಚಾರ ಮತ್ತೊಂದು ಸಂಗತಿ. ಆದರೆ, ಸಮಾಜಕ್ಕೆ ಅವರ ಸೇವೆಯ ಬಗ್ಗೆ ನಮಗೆ ಅಪಾರ ಗೌರವವಿದೆ” ಎಂದು ನ್ಯಾ. ಶಿಂಧೆ ಹೇಳಿದರು.

Also Read
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ನಿಬಂಧನೆಯ ಹಿನ್ನೆಲೆಯಲ್ಲಿ ನ್ಯಾಯಾಲಯವಾಗಿ ಪೀಠವು ತನ್ನ ಮಿತಿಯ ಬಗ್ಗೆ ಪ್ರಸ್ತಾಪಿಸಿತು. “ದೆಹಲಿ ಹೈಕೋರ್ಟ್‌ ಆದೇಶವು ಆ ಪ್ರಕರಣಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ” ಎಂದು ನ್ಯಾ. ಶಿಂಧೆ ಹೇಳಿದರು.

ಎನ್‌ಐಎ ವಿಶೇಷ ನ್ಯಾಯಾಲಯದ ಜಾಮೀನು ಆದೇಶವನ್ನು ಪ್ರಶ್ನಿಸಿ ಸ್ವಾಮಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಇಯಾನ್‌ ಡಿಸೋಜಾ ಅವರು ಸ್ವಾಮಿ ಅವರ ಸಾವಿನ ವಿಚಾರ ತಿಳಿಸಿದರು ಎಂಬುದಾಗಿ ಪೀಠ ಹೇಳಿತು. ಇದೇ ವೇಳೆ ಸ್ಟ್ಯಾನ್‌ಸ್ವಾಮಿ ಅವರ ಪರ ವಕೀಲರು ಆಸ್ಪತ್ರೆ ಅಥವಾ ನ್ಯಾಯಾಲಯಗಳ ಬಗ್ಗೆ ಯಾವುದೇ ವಿಷಾದ ಇಲ್ಲ ಎಂದು ಸ್ಪಷ್ಟಪಡಿಸಿದರು. ಜುಲೈ 23ಕ್ಕೆ ವಿಚಾರಣೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com