
ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ಅವರು ತಮ್ಮ ಪತ್ನಿ ಮತ್ತು ಮಗಳಿಗೆ ಮಧ್ಯಂತರ ಜೀವನಾಂಶ ಪಾವತಿಸುವಂತೆ ನಿರ್ದೇಶಿಸಿದ್ದ ಮುಂಬೈ ನ್ಯಾಯಾಲಯದ ಆದೇಶಕ್ಕೆ ಬಾಂಬೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣದ ಹಿರಿಯ ನಾಯಕ ಮುಂಡೆ ಅವರು ಪತ್ನಿಗೆ ನೀಡಲು ನ್ಯಾಯಾಲಯವು ಆದೇಶಿಸಿರುವ ಮೊತ್ತದ ಶೇ 50ರಷ್ಟನ್ನು ತನ್ನೆದುರು ಠೇವಣಿ ಇಡಬೇಕೆಂಬ ಷರತ್ತು ವಿಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರಿದ್ದ ಏಕಸದಸ್ಯ ಪೀಠ ತಡೆ ನೀಡಿತು.
ಬಾಂದ್ರಾದ ಜೆಎಂಎಫ್‌ಸಿ ನ್ಯಾಯಾಲಯ ಫೆಬ್ರವರಿ 4ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸಚಿವ ಮುಂಡೆ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದ ಮುಂದೆ ಪಕ್ಷಕಾರರು ಸಲ್ಲಿಸಿರುವ ಆಸ್ತಿ ಮತ್ತು ಸಾಲ ಕುರಿತಂತೆ ಅಫಿಡವಿಟ್ ದಾಖಲಿಸಲು ಮುಂಡೆ ಅವರಿಗೆ ನ್ಯಾಯಾಲಯ ಅನುಮತಿ ನೀಡಿತು. ಜೊತೆಗೆ ಪ್ರತಿವಾದಿಗಳು ಆರು ವಾರಗಳಲ್ಲಿ ತಮ್ಮ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತು.
ತಾನು ಮತ್ತು ತನ್ನ ಮಕ್ಕಳು ಕೌಟುಂಬಿಕ ಹಿಂಸೆ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗಿದ್ದೇವೆ ಎಂದು ದೂರಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ- 2005ರ ಅಡಿ ಮುಂಡೆ ಅವರ ಪತ್ನಿ ಅರ್ಜಿ ಸಲ್ಲಿಸಿದ್ದರು.
ಮಧ್ಯಂತರ ಜೀವನಾಂಶವಾಗಿ ಪತ್ನಿಗೆ ತಿಂಗಳಿಗೆ ₹1.25 ಲಕ್ಷ ಮತ್ತು ಅವರ ಮಗಳಿಗೆ ₹75,000 ಪಾವತಿಸುವಂತೆ ಮ್ಯಾಜಿಸ್ಟ್ರೇಟ್ ಅವರು ಮುಂಡೆ ಅವರಿಗೆ ನಿರ್ದೇಶನ ನೀಡಿದ್ದರು. ಆದೇಶವನ್ನು ಮಜಗಾಂವ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು.
ಪಕ್ಷಕಾರರ ಆದಾಯ, ಸಾಲ ಮತ್ತು ಅಗತ್ಯತೆಗಳನ್ನು ತುಲನಾತ್ಮಕವಾಗಿ ಪರಿಗಣಿಸಲು ನ್ಯಾಯಾಲಯಗಳು ವಿಫಲವಾಗಿವೆ ಎಂದು ಮುಂಡೆ ಪರ ವಕೀಲರು ವಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 14 ರಂದು ನಡೆಯಲಿದೆ.