ಸಾಮಾಜಿಕ ಜಾಲತಾಣ ಇಲ್ಲವೇ ಆನ್‌ಲೈನ್ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಹರಡಲಾಗುವ ಸುಳ್ಳು ಅಥವಾ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಫ್ಯಾಕ್ಟ್ ಚೆಕ್ (ಸತ್ಯ ಪರಿಶೀಲನಾ ಘಟಕ) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023ರ ನಿಯಮಗಳನ್ನು ವಿಶೇಷವಾಗಿ 3ನೇ ನಿಯಮವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ [ಕುನಾಲ್ ಕಮ್ರಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ಅರ್ಜಿಗಳು].
ಪ್ರಕರಣದ ಸಂಬಂಧ ವಿಭಾಗೀಯ ಪೀಠ ಕಳೆದ ಜನವರಿಯಲ್ಲಿ ಭಿನ್ನ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ನೇಮಕವಾಗಿದ್ದ ಮೂರನೇ ನ್ಯಾಯಮೂರ್ತಿ (ಟೈ ಬ್ರೇಕರ್ ಜಜ್) ಎ ಎಸ್ ಚಂದೂರ್‌ಕರ್ ಅವರು ಇಂದು ತೀರ್ಪು ಪ್ರಕಟಿಸಿದರು.
"ಇದು ಸಂವಿಧಾನದ 14 ಮತ್ತು 19 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ" ಎಂಬುದಾಗಿ ಏಕಸದಸ್ಯ ಪೀಠ ತಿಳಿಸಿತು.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ- 2021ಕ್ಕೆ ಐಟಿ ತಿದ್ದುಪಡಿ ನಿಯಮಾವಳಿ- 2023 ತಿದ್ದುಪಡಿಗಳನ್ನು ಮಾಡಿತ್ತು.
ಸುಳ್ಳು ಆನ್‌ಲೈನ್ ಸುದ್ದಿ ಪತ್ತೆಹಚ್ಚುವುದಕ್ಕಾಗಿ ಸತ್ಯ ಪರಿಶೀಲನಾ ಘಟಕ ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ 3ನೇ ನಿಯಮ ಪ್ರಶ್ನಿಸಿ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರೂ ಸೇರಿದಂತೆ ವಿವಿಧ ಅರ್ಜಿದಾರರು ಮನವಿ ಸಲ್ಲಿಸಿದ್ದರು.
ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ಮತ್ತು 19 (1) (ಎ) (ಜಿ) ವಿಧಿಯನ್ನು (ಯಾವುದೇ ಉದ್ಯೋಗ ಇಲ್ಲವೇ ವ್ಯಾಪಾರದಲ್ಲಿ ತೊಡಗುವ ಸ್ವಾತಂತ್ರ್ಯ ಒದಗಿಸುವ) ಉಲ್ಲಂಘಿಸುತ್ತವೆ ಎಂದು ದೂರಲಾಗಿತ್ತು.
ಜನವರಿ 31ರಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದರು.
ನ್ಯಾಯಮೂರ್ತಿ ಪಟೇಲ್ ಅವರು ಅರ್ಜಿದಾರರ ಪರವಾಗಿ ತೀರ್ಪು ನೀಡಿ ನಿಯಮ 3 ಅನ್ನು ರದ್ದುಗೊಳಿಸಿದ್ದರು. ಆದರೆ ನ್ಯಾಯಮೂರ್ತಿ ನೀಲಾ ಅವರು ಅರ್ಜಿಗಳನ್ನು ವಜಾಗೊಳಿಸಿ ನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರು.
ಬಳಿಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ತಮ್ಮ ಅಭಿಪ್ರಾಯ ನೀಡುವುದಕ್ಕಾಗಿ ನ್ಯಾ. ಚಂದೂರ್‌ಕರ್ ಅವರನ್ನು ಮೂರನೇ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದ್ದರು.
ಹಿರಿಯ ವಕೀಲರಾದ ನವರೋಜ್ ಸರ್ವೈ ಮತ್ತು ಅರವಿಂದ್ ದಾತಾರ್ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.