
ಮುಂಬೈನ ಉಪನಗರ ರೈಲುಗಳಲ್ಲಿ (ಮುಂಬೈ ಲೋಕಲ್ ರೈಲುಗಳು) ಪ್ರಯಾಣಿಕರ ಸಾವಿನ ಸಂಖ್ಯೆಯನ್ನು ತಡೆಯಲು ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಬೇಕೆಂದು ಬಾಂಬೆ ಹೈಕೋರ್ಟ್ ಶುಕ್ರವಾರ ಸಲಹೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರನ್ನೊಳಗೊಂಡ ವಿಭಾಗೀಯ ಪೀಠವು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರೊಬ್ಬರು 2024 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ನಡೆಸುತ್ತಿದ್ದು, ಮುಂಬೈ ಸ್ಥಳೀಯ ರೈಲುಗಳಲ್ಲಿ ಸಂಭವಿಸುತ್ತಿರುವ ಅಗಾಧ ಸಂಖ್ಯೆಯ ಸಾವುಗಳ ಬಗ್ಗೆ ಗಮನ ಸೆಳೆಯಿತು.
ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರು, "ನೀವು (ರೈಲ್ವೆ) ಮುಚ್ಚುವ ಸ್ವಯಂಚಾಲಿತ ಬಾಗಿಲುಗಳನ್ನು ಒದಗಿಸಬೇಕು... ಇದು ಒಬ್ಬ ಸಾಮಾನ್ಯ ವ್ಯಕ್ತಿಯ ಸಲಹೆ, ನಾವೇನು ತಜ್ಞರಲ್ಲ" ಎಂದು ಹೇಳಿದರು.
ಇತ್ತೀಚೆಗೆ ಮುಂಬ್ರಾದಲ್ಲಿ ಜನದಟ್ಟಣೆಯ ವೇಳೆ ಎರಡು ಕಿಕ್ಕಿರಿದ ರೈಲುಗಳಿಂದ ಬಿದ್ದು ನಾಲ್ವರು ಪ್ರಯಾಣಿಕರು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡ ದುರಂತ ಘಟನೆ ನಡೆದಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.
ವಿಷಯದ ಗಹನತೆಯನ್ನು ತಿಳಿಸುವ ಸಲುವಾಗಿ 2024ರ ಒಂದು ವರ್ಷದ ಅವಧಿಯಲ್ಲಿಯೇ ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವಾಗ 3,588 ಜನರು ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 10 ಸಾವುಗಳು ಸಂಭವಿಸಿವೆ ಎಂದು ತಿಳಿಸುವ ಅಧಿಕೃತ ಅಂಕಿಅಂಶಗಳನ್ನು ನ್ಯಾಯಾಲಯವು ಉಲ್ಲೇಖಿಸಿತು.
ಅಫಿಡವಿಟ್‌ನಲ್ಲಿ ಸಲ್ಲಿಸಿದ್ದ ದತ್ತಾಂಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಮಾರ್ನೆ ಅವರು, "2024 ರಲ್ಲಿಯೇ, ಮುಂಬೈ ಲೋಕಲ್ ರೈಲುಗಳಲ್ಲಿ ಪಯಣಿಸುವ 3,588 ಕ್ಕೂ ಹೆಚ್ಚು ಪ್ರಯಾಣಿಕರ ಸಾವುಗಳು ಸಂಭವಿಸಿವೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ದಿನಕ್ಕೆ ಸರಾಸರಿ 10 ಸಾವುಗಳು ಸಂಭವಿಸಿವೆ. ಅಂದರೆ ಪ್ರತಿದಿನ 10 ಮುಂಬೈ ನಿವಾಸಿಗಳು ಲೋಕಲ್ ರೈಲುಗಳಲ್ಲಿ ಪಯಣಿಸುವಾಗ ಸಾಯುತ್ತಾರೆ. ಇದು ಆತಂಕಕಾರಿ ಪರಿಸ್ಥಿತಿ" ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅನಿಲ್ ಸಿಂಗ್, ಸಾವುನೋವುಗಳ ಸಮಸ್ಯೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೆ, ಕೇಂದ್ರದ ರೈಲ್ವೆಯ ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೇತೃತ್ವದ ಪ್ರತ್ಯೇಕ ಬಹು-ಶಿಸ್ತೀಯ ಸಮಿತಿಯು ಮುಂಬ್ರಾ ಘಟನೆಯ ತನಿಖೆ ನಡೆಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮುಂಬೈ ಲೋಕಲ್ ರೈಲುಗಳಲ್ಲಿ "ಶೂನ್ಯ ಸಾವು" ಸಾಧಿಸುವುದು ಉನ್ನತ ಮಟ್ಟದ ಸಮಿತಿಯ ಗುರಿಯಾಗಿದೆ ಎಂದು ಸಿಂಗ್ ಹೇಳಿದರು. ಅರ್ಜಿದಾರರು ಸಮಿತಿಗಳಿಗೆ ಸಲಹೆಗಳನ್ನು ಸಲ್ಲಿಸಲು ಆಹ್ವಾನಿಸಿದರು.
ಆದರೆ ಇಂತಹ ದುರ್ಘಟನೆಗಳನ್ನು ನಿವಾರಿಸಲು, ಪ್ರಸ್ತುತ ಪ್ರಯತ್ನಗಳು ಸಾಕಾಗಲಿವೆ ಎಂದು ನ್ಯಾಯಾಲಯಕ್ಕೆ ತೃಪ್ತಿಯಾಗಲಿಲ್ಲ. ಸಾವುನೋವುಗಳು ಪದೇಪದೇ ಸಂಭವಿಸುತ್ತಲೇ ಇರುವುದರಿಂದ ರಾಜ್ಯವು ತೆಗೆದುಕೊಂಡಿರುವ ಕ್ರಮಗಳು ಸಾಕಾಗುವುದಿಲ್ಲ ಎಂದು ಪೀಠವು ಹೇಳಿತು. ಮತ್ತಷ್ಟು ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಮಿತಿಗಳು ರಚನಾತ್ಮಕ ಸುರಕ್ಷತಾ ಕ್ರಮಗಳನ್ನು ಅನ್ವೇಷಿಸಬೇಕೆಂದು ನ್ಯಾಯಾಲಯ ಶಿಫಾರಸು ಮಾಡಿತು.
ಸಲಹೆಗಳನ್ನು ಪರಿಗಣಿಸಲು ಎಎಸ್‌ಜಿ ಒಪ್ಪಿಕೊಂಡರಾದರು ಅವುಗಳ ಅನುಷ್ಠಾನಗೊಳಿಸುವಲ್ಲಿ ಇರುವ ಸವಾಲುಗಳ ಬಗ್ಗೆ ಗಮನಸೆಳೆದರು.
"ಲೋಕಲ್ ರೈಲುಗಳು ಓಡುತ್ತಿರುವ ಸಮಯದಲ್ಲಿ ಯಾವುದೇ ಕೆಲಸಗಳನ್ನು ಕೈಗೊಳ್ಳಲಾಗುವುದಿಲ್ಲ. ನಾವು ಪ್ಲಾರ್ಟ್‌ಫಾರ್ಮ್‌ಗಳಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ. ವಿಭಜನಾ ಗೋಡೆಗಳನ್ನು ನಿರ್ಮಿಸಬೇಕಿದೆ ಎಂದರು. ಕೆಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
ಅಂತಿಮವಾಗಿ ನ್ಯಾಯಾಲಯವು ರಾಜ್ಯ ಮತ್ತು ರೈಲ್ವೇ ಅಧಿಕಾರಿಗಳಿಗೆ ಎರಡೂ ಸಮಿತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ನಿರ್ದೇಶಿಸಿತು. ಅವುಗಳ ಶಿಫಾರಸುಗಳು ಮತ್ತು ಅನುಷ್ಠಾನಕ್ಕೆ ಸ್ಪಷ್ಟವಾದ ಸಮಯಮಿತಿ ನಿಗದಿಪಡಿಸಲು ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.