ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗಳಿಗೆ ಪ್ರವಾಸಿಗರಿಂದ ತೊಂದರೆ: ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಬಾಂಬೆ ಹೈಕೋರ್ಟ್

ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸಿಗರನ್ನು ಕರೆದೊಯ್ದ ಜಿಪ್ಸಿ ವಾಹನಗಳ ಮಾರ್ಗದರ್ಶಕರು ಮತ್ತು ಅರಣ್ಯ ಇಲಾಖೆಯ ಅನುಮೋದಿತ ಚಾಲಕರ ನಡೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
Tiger
Tiger
Published on

ಮಹಾರಾಷ್ಟ್ರದ ಗೋತಂಗಾವ್ ಗೇಟ್ ಬಳಿಯ ಉಮ್ರೆದ್ ಪೌನಿ ಕರ್ಹಂಡ್ಲಾ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿ ಮತ್ತು ಅದರ ಐದು ಮರಿಗಳ ಸಂಚಾರಕ್ಕೆ ಪ್ರವಾಸಿಗರು ಅಡ್ಡಿಪಡಿಸಿದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಈಚೆಗೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸಿಗರನ್ನು ಕರೆದೊಯ್ದ ಜಿಪ್ಸಿ ವಾಹನಗಳ ಮಾರ್ಗದರ್ಶಕರು ಮತ್ತು ಅರಣ್ಯ ಇಲಾಖೆಯ ಅನುಮೋದಿತ ಚಾಲಕರ ನಡೆಗೆ ನ್ಯಾಯಮೂರ್ತಿಗಳಾದ ನಿತಿನ್ ಡಬ್ಲ್ಯೂ ಸಾಂಬ್ರೆ ಮತ್ತು ವೃಶಾಲಿ ವಿ ಜೋಶಿ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ಜಿಪ್ಸಿ ಚಾಲಕರು, ಮಾರ್ಗದರ್ಶಕರು ಹಾಗೂ ಪ್ರವಾಸಿಗರ ಸಂಪೂರ್ಣ ಅಶಿಸ್ತಿನ ನಡವಳಿಕೆಯನ್ನು ನಾವು ಗಮನಿಸಿದ್ದೇವೆ ಇದರಿಂದಾಗಿ ಪ್ರಕೃತಿಯ ನಿಯಮಗಳನ್ನು ಮಾತ್ರವಲ್ಲದೆ ಹುಲಿ ಹಾಗೂ ಅದರ ಮರಿಗಳಿಗೆ ಬಹಳ ಗೊಂದಲದ ಸನ್ನಿವೇಶ ಉಂಟಾಗಿರುವುದು ಕಂಡುಬಂದಿದೆ" ಎಂದು ನ್ಯಾಯಾಲಯ ಜನವರಿ 6ರ ಆದೇಶದಲ್ಲಿ ಹೇಳಿದೆ.

Also Read
ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ: ಜ.15ರಂದು ಜಂಟಿ ಸರ್ವೇಗೆ ಹೈಕೋರ್ಟ್‌ ಸೂಚನೆ

ಡಿಸೆಂಬರ್ 31, 2024ರಂದು ಜಿಪ್ಸಿ ವಾಹನಗಳು ಹುಲಿ ಮತ್ತು ಅದರ ಮರಿಗಳ ಓಡಾಟಕ್ಕೆ ಅಡ್ಡಿಪಡಿಸಿ ಅವು ವೇದನೆ ಅನುಭವಿಸುವಂತೆ ಮಾಡಿದ್ದವು. ಘಟನೆ ಮರಾಠಿ ದೈನಿಕದಲ್ಲಿ ವರದಿಯಾಗಿತ್ತು. ಬಳಿಕ ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿಯೂ ಹರಿದಾಡಿತ್ತು.

ಘಟನೆಯನ್ನು ಲಘುವಾಗಿ ಪರಿಗಣಿಸಿದ ಅರಣ್ಯ ಇಲಾಖೆಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಕೃತ್ಯಕ್ಕೆ ಕಾರಣವಾದವರನ್ನು ಅಮಾನತುಪಡಿಸಲು ತಳೆದ ಮೃದು ಧೋರಣೆಯನ್ನು ಖಂಡಿಸಿರುವ ಪೀಠ ಇದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದಿದೆ.

Also Read
ಅರಣ್ಯ ಭೂಮಿಯನ್ನು ಮೃಗಾಲಯ ಅಥವಾ ಸಫಾರಿ ಉದ್ಯಾನ ಮಾಡಲು ನ್ಯಾಯಾಲಯದ ಪೂರ್ವಾನುಮತಿ ಅಗತ್ಯ: ಸುಪ್ರೀಂ ಕೋರ್ಟ್

ಅರಣ್ಯ ಇಲಾಖೆಯ ಗುಪ್ತಚರ ವಿಭಾಗದ ವೈಫಲ್ಯವನ್ನೂ ಖಂಡಿಸಿರುವ ನ್ಯಾಯಾಲಯ ಸ್ವಂತ ಸಿಬ್ಬಂದಿಯಿಂದ ವರದಿ‌ಪಡೆದು ಕ್ರಮ ಕೈಗೊಳ್ಳುವ ಬದಲು ಮಾಧ್ಯಮಗಳು ಸಾಮಾಜಿಕ‌ ಮಾಧ್ಯಮಗಳಲ್ಲಿ ವಿಷಯ ಬಹಿರಂಗವಾದ ಬಳಿಕ‌‌‌ ಕ್ರಮಕ್ಕೆ ಮುಂದಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅಭಯಾರಣ್ಯ ಪ್ರವೇಶದ ಮೇಲಿನ ನಿರ್ಬಂಧಗಳು ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುವುದನ್ನು ತಡೆಯುವ ವನ್ಯಜೀವಿ (ಸಂರಕ್ಷಣಾ) ಕಾಯಿದೆ- 1972 ಪಾಲನೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಕರಣ ಎತ್ತಿ ತೋರಿಸಿದೆ ಎಂದು ಅದು ಹೇಳಿದೆ. "ಕಾಯಿದೆಯ ನಿಬಂಧನೆಗಳ ಕುರಿತು ಅರಣ್ಯ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡಬೇಕಾಗಿದೆ" ಎಂದು ಅದು ಕಿವಿ ಹಿಂಡಿದೆ.

ಹೀಗಾಗಿ ಹುಲಿ‌ ಮತ್ತು ಅದರ ಮರಿಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ಜನವರಿ 10ರೊಳಗೆ ವಿವರವಾದ ಅಫಿಡವಿಟ್ ಸಲ್ಲಿಸಲು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಅದು ನಿರ್ದೇಶಿಸಿತು. ಹುಲಿ ಮತ್ತು ಅದರ ಮರಿಗಳಿರುವ ಪ್ರದೇಶಗಳಲ್ಲಿ ಮಾನವ ಸಂಚಾರವನ್ನು ಮತ್ತಷ್ಟು ನಿರ್ಬಂಧಿಸುವ ಕುರಿತು ಅರಣ್ಯ ಇಲಾಖೆ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಘಟನೆ ಕುರಿತಾದ ಎಲ್ಲಾ ಸಂಬಂಧಿತ ದಾಖಲೆಗಳನ್ನು ಅಮಿಕಸ್ ಕ್ಯೂರಿ ಸುಧೀರ್ ವೊಡಿಟೆಲ್ ಅವರೊಂದಿಗೆ ಹಂಚಿಕೊಳ್ಳುವಂತೆ ನ್ಯಾಯಲಯ ಅಧಿಕಾರಿಗಳಿಗೆ ಸೂಚಿಸಿತು. ಜನವರಿ 20 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com