ಮಗ, ಸಹೋದರಿ, ಆಕೆಯ ಕುಟುಂಬದ ಕಗ್ಗೊಲೆ: ವ್ಯಕ್ತಿಗೆ ವಿಧಿಸಿದ್ದ ಮರಣದಂಡನೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಸೆರೆವಾಸದಲ್ಲಿದ್ದಾಗ ಆತ ಉಳಿದ ಕೈದಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ. ಇದು ಆತ ಸುಧಾರಿಸಿಕೊಳ್ಳುವುದಿಲ್ಲ ಅಥವಾ ಆತನ ಸುಧಾರಣೆಗೆ ಯಾವುದೇ ಅವಕಾಶಗಳಿಲ್ಲ ಎಂದು ಹೇಳಲು ಪ್ರೇರೇಪಿಸುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
ಮರಣದಂಡನೆ
ಮರಣದಂಡನೆ
Published on

ಸ್ವಂತ ಮಗ, ಸಹೋದರಿ, ಭಾವ, ಸೋದರ ಸೊಸೆ ಮತ್ತು ಸಹೋದರಿಯ ಅತ್ತೆಯನ್ನು ಕೊಂದ 45 ವರ್ಷದ ವ್ಯಕ್ತಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಈಚೆಗೆ ಎತ್ತಿಹಿಡಿದಿದೆ (ಮಹಾರಾಷ್ಟ್ರ ಸರ್ಕಾರ ಮತ್ತು ವಿವೇಕ್ ಗುಲಾಬ್‌ರಾವ್‌ ಪಾಲಟ್ಕರ್ ಇನ್ನಿತರರ ನಡುವಣ ಪ್ರಕರಣ).

ಮಾನವೀಯತೆ ಮರೆತು, ತಾನು ಕೊಲೆ ಮಾಡುತ್ತಿರುವುದು ಮಕ್ಕಳು ಮತ್ತು ಹೆಣ್ಣುಜೀವಗಳನ್ನು ಹಾಗೂ ಸಂಬಂಧಿಕರನ್ನು ಎಂಬುದನ್ನು ಸಂಪೂರ್ಣವಾಗಿ ಕಡೆಗಣಿಸಿ ಅಪರಾಧಿ ಕೊಲೆ ಮಾಡಿದ್ದಾನೆ ಎಂದು ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ಎಂ ಡಬ್ಲ್ಯೂ ಚಾಂದ್ವಾನಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಆತ ತನ್ನ ಅಪ್ರಾಪ್ತ ಮಗ ಅಥವಾ ಅಪ್ರಾಪ್ತ ಸೋದರ ಸೊಸೆಯನ್ನು ಸಹ ಬಿಟ್ಟಿಲ್ಲ. ಅವನ ನಡೆ ಸಾಕಷ್ಟು ಕ್ರೌರ್ಯ, ಒರಟುತನ ಮತ್ತು ಉನ್ಮಾದದಿಂದ ಕೂಡಿದೆ. ತನಗೆ ಗಲ್ಲಶಿಕ್ಷೆ ನೀಡುವಂತೆ ವಿಚಾರಣಾ ನ್ಯಾಯಾಧೀಶರಿಗೆ ಆತ ಹೇಳಿದ್ದಾನೆ. ಶಿಕ್ಷೆಯ ನಂತರ, ಸೆರೆವಾಸದಲ್ಲಿದ್ದಾಗ ಆತ ಉಳಿದ ಕೈದಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಇದು ಆತ ಸುಧಾರಿಸಿಕೊಳ್ಳುವುದಿಲ್ಲ ಅಥವಾ ಆತನ ಸುಧಾರಣೆಗೆ ಯಾವುದೇ ಅವಕಾಶಗಳಿಲ್ಲ ಎಂದು ಹೇಳಲು ಪ್ರೇರೇಪಿಸುತ್ತದೆ" ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ತಣ್ಣನೆ ರಕ್ತದ ಅಪರಾಧಿ ತನ್ನ ಸ್ವಂತ ಮಗ ಮತ್ತು ತನ್ನ ಸಹೋದರಿ ಮತ್ತವಳ ಇಡೀ ಕುಟುಂಬವನ್ನು ಪೂರ್ವಯೋಜಿತವಾಗಿ ಕೊಂದಿದ್ದು ಸಮಾಜಕ್ಕೆ ಆತ ಮಾರಕ ಎಂದು ಅದು ಹೇಳಿದೆ.

ಆರಂಭದಲ್ಲಿ ತನ್ನ ಭಾವನನ್ನು ಕೊಲ್ಲುವ ಉದ್ದೇಶ ಹೊಂದಿದ್ದರೂ ನಂತರ ಇಡೀ ಕುಟುಂಬವನ್ನು ಆತ ಕೊಂದ. ಆತನ ಮನಸ್ಸಿನಲ್ಲಿ ಭಾವನೆಗಳು ಮತ್ತು ಕರುಣೆಗೆ ಜಾಗವಿಲ್ಲ ಎಂದು ತೋರುತ್ತದೆ. ಆರೋಪಿಯ ಹಿಂಸಾ ಮನೋಭಾವ ಗಮನಿಸಿದರೆ ಇಬ್ಬರು ಮಕ್ಕಳ (ಅವನ ಸ್ವಂತ ಮಗಳು ಮತ್ತು ಅವನ ವಿರುದ್ಧ ಸಾಕ್ಷಿ ನೀಡಿದ ಸಹೋದರಿಯ ಮಗನ) ಜೀವಕ್ಕೂ ಅಪಾಯವಿದೆ ಅನ್ನಿಸುತ್ತಿದೆ. ಇದಲ್ಲದೆ, ಆತನ ಕ್ರೂರ ಮತ್ತು ನಿರ್ದಯ ಪ್ರವೃತ್ತಿ ಸಮಾಜಕ್ಕೆ ಅಪಾಯಕಾರಿಯಾದ್ದರಿಂದ ಆತ ಸುಸಂಸ್ಕೃತ ಸಮಾಜದಲ್ಲಿ ಬದುಕಲು ಅರ್ಹನಲ್ಲ ಎಂದು ನ್ಯಾಯಾಲಯ ನುಡಿದಿದೆ.

ಆದ್ದರಿಂದ, ಪ್ರಕರಣ ಮರಣದಂಡನೆಗೆ ಅರ್ಹವಾದ ಅಪರೂಪದ ವರ್ಗಕ್ಕೆ ಸೇರಿದೆ ಎಂದು ಅದು ಹೇಳಿದೆ.

ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ಎಂ.ಡಬ್ಲ್ಯೂ.
ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ಎಂ.ಡಬ್ಲ್ಯೂ.

ವೃತ್ತಿಯಲ್ಲಿ ಕಾರ್ಮಿಕನಾಗಿದ್ದ ವಿವೇಕ್ ಪಾಲಟ್ಕರ್, 2014ರಲ್ಲಿ ತನ್ನ ಪತ್ನಿಯನ್ನು ಕೊಂದಿದ್ದಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ಈ ಮೊದಲು ಶಿಕ್ಷೆಗೊಳಗಾಗಿದ್ದ. ಆದರೆ ಆತನನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆತ ಜೈಲಿನಲ್ಲಿದ್ದಾಗ, ಆತನ ಇಬ್ಬರು ಮಕ್ಕಳು ಆತನ ಸಹೋದರಿ ಹಾಗೂ ಆಕೆಯ ಕುಟುಂಬದೊಂದಿಗೆ ವಾಸಿಸುವಂತಾಗಿತ್ತು.

ಜೈಲಿನಿಂದ ಬಿಡುಗಡೆಯಾದ ನಂತರ ಆತನ ದಾವೆಗಾಗಿ ಮತ್ತು ಆತನ ಮಕ್ಕಳನ್ನು ನೋಡಿಕೊಳ್ಳಲು ಮಾಡಲಾದ ವೆಚ್ಚ ಮರುಪಾವತಿಸುವಂತೆ ಆತನ ಸೋದರ ಮಾವ ಕೇಳಿದ್ದರು. ಇದು ಇಬ್ಬರ ನಡುವೆ ಜಗಳಕ್ಕೆ ತಿದಿ ಒತ್ತಿತ್ತು.

ಅತ್ಯಂತ ಬರ್ಬರವಾಗಿ ಸಂಬಂಧಿಕರನ್ನು ಆರೋಪಿ ಕೊಲೆ ಮಾಡಿರುವ ರೀತಿಯನ್ನು ಗಮನಿಸಿರುವ ನ್ಯಾಯಾಲಯ ಆರೋಪಿ ಜೀವಗಳನ್ನು ಆಪೋಶನ ತೆಗೆದುಕೊಳ್ಳುವ ದೆವ್ವ ಎಂದು ಬಣ್ಣಿಸಿದೆ.

ಒತ್ತಡ ಅಥವಾ ಪ್ರಚೋದನೆಯಿಂದಾಗಿ ಆತ ಕೃತ್ಯ ಎಸಗಿಲ್ಲ ಬದಲಿಗೆ ವಿವೇಚನಾರಹಿತ ಹಿಂಸಾತ್ಮಕ ದಾಳಿಯಿಂದ ಮುಗ್ಧಜೀವಗಳನ್ನು ಬಲಿಪಡಿದಿದ್ದಾನೆ ಎಂದಿರುವ ಪೀಠ ಮಹಿಳೆಯರು ಮತ್ತು ಮುಗ್ಧ ಮಕ್ಕಳು ಮಲಗಿದ್ದಾಗ ಕ್ರೂರವಾಗಿ ಕೊಂದಿರುವುದು ಸಹಿಸಲಾಗದ ವಿಚಾರ ಎಂದಿದೆ.

ಈ ಅವಲೋಕನಗಳೊಂದಿಗೆ, ಅದು ಅಪರಾಧಿಗೆ ವಿಧಿಸಲಾದ ಮರಣದಂಡನೆಯನ್ನು ಎತ್ತಿಹಿಡಿದಿದೆ.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
State of Maharashtra vs Vivek Gulabrao Palatkar.pdf
Preview
Kannada Bar & Bench
kannada.barandbench.com