ನೀಲಿ ಬಾಟಲಿ ಮತ್ತು ಪ್ಯಾರಾಶೂಟ್ ಆಯಿಲ್ ಹೋಲುವ ಲೇಬಲ್‌ನಂತಹ ಸಂರಕ್ಷಿತ ವೈಶಿಷ್ಟ್ಯಗಳನ್ನು ಬಳಸದಂತೆ ಕೆಎಲ್ಎಫ್ ನಿರ್ಮಲ್ ಇಂಡಸ್ಟ್ರೀಸ್‌ಗೆ ತಡೆ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ [ಮಾರಿಕೊ ಲಿಮಿಟೆಡ್ ಮತ್ತು ಕೆಎಲ್‌ಎಫ್ ನಿರ್ಮಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಆದೇಶ ತೆರವುಗೊಳಿಸಲು ಅಥವಾ ಬದಿಗೆ ಸರಿಸಲು ಕಾರಣವನ್ನು ನಿರೂಪಿಸುವಲ್ಲಿ ಕೆಎಲ್ಎಫ್ ನಿರ್ಮಲ್ ಇಂಡಸ್ಟ್ರೀಸ್ ವಿಫಲವಾಗಿದೆ ಎಂದು ನ್ಯಾಯಮೂರ್ತಿ ಆರ್ ಐ ಚಾಗ್ಲಾ ಅಭಿಪ್ರಾಯಪಟ್ಟರು.
"ಸಿಪಿಸಿಯ ಆದೇಶ 39 ನಿಯಮ 4ರ ಪ್ರಕಾರ ಕೆಎಲ್ಎಫ್ ನಿರ್ಮಲ್ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಹುರುಳಿರುವಂತೆ ಕಾಣುತ್ತಿಲ್ಲ. ಏಕೆಂದರೆ ನನ್ನ ದೃಷ್ಟಿಯಲ್ಲಿ ಕೆಎಲ್ಎಫ್ ತನ್ನ ಹೊರೆಯನ್ನು ನಿರ್ವಹಿಸುವ ಮೂಲಕ ಮತ್ತು / ಅಥವಾ ಸಿಪಿಸಿಯ ಆದೇಶ 39 ನಿಯಮ 4 ರ ಪ್ರಕಾರ ನೀಡಲಾಗಿದ್ದ ಏಕಪಕ್ಷೀಯ ಆದೇಶವನ್ನು ರದ್ದುಪಡಿಸಲು ಅಗತ್ಯವಿರುವ ಅವಶ್ಯಕತೆಗಳನ್ನು ಪೂರೈಸುವಂತಹ ಯಾವುದೇ ವಾದ ಮಂಡಿಸಲು ವಿಫಲವಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತನ್ನದೇ ರೀತಿಯ ಲೇಬಲ್ ಗಳನ್ನು ತಾನು ತಯಾರಿಸುವಂಥದ್ದೇ ನೀಲಿ ಬಾಟಲಿ ಮೇಲೆ ಮುದ್ರಿಸಿ ತೈಲ ಮಾರಾಟ ಮಾಡುವ ಮೂಲಕ ತನ್ನ ವಾಣಿಜ್ಯ ಚಿಹ್ನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಕೆಎಲ್‌ಎಫ್ ನಿರ್ಮಲ್ ಇಂಡಸ್ಟ್ರೀಸ್ ವಿರುದ್ಧ ಮಾರಿಕೊ ಲಿಮಿಟೆಡ್ ಮೊಕದ್ದಮೆ ಹೂಡಿತ್ತು.
ಕೆಎಲ್ಎಫ್ ಉತ್ಪನ್ನಗಳ ಬಗ್ಗೆ ಜುಲೈ 2023ರಲ್ಲಿ ಮಾರಿಕೊಗೆ ತಿಳಿದುಬಂದಿದ್ದು ತಕ್ಷಣವೇ ಅದರ ವಿರುದ್ಧ ತಡೆ ಆದೇಶ ಕೋರಿ ಅದು ನ್ಯಾಯಾಲಯದ ಮೊರೆ ಹೋಗಿತ್ತು.
ಪ್ಯಾರಶೂಟ್‌ನ ತೆಂಗಿನಮರದ ಚಿಹ್ನೆ, ತೆಂಗಿನಕಾಯಿ ಹೋಳು, ನೀಲಿ ಬಾಟಲಿ/ ಕಂಟೇನರ್‌ಗಳು ಹಾಗೂ ವಾಣಿಜ್ಯ ಪೋಷಾಕನ್ನು ಹೋಲುವ ಪ್ಯಾಕೆಂಜಿಂಗ್ ವಿಧಾನ ಬಳಸದಂತೆ ಕೆಎಲ್‌ಎಫ್ ನಿರ್ಮಲ್‌ಗೆ ನಿರ್ಬಂಧ ವಿಧಿಸಿ ಆಗಸ್ಟ್ 18, 2023ರಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಈ ಆದೇಶದಿಂದ ಅಸಮಾಧಾನಗೊಂಡ ಕೆಎಲ್ಎಫ್ ಸಿಪಿಸಿಯ ಆದೇಶ 39 ನಿಯಮ 4ರ ಅಡಿಯಲ್ಲಿ ತಡೆಯಾಜ್ಞೆ ಆದೇಶ ತೆರವುಗೊಳಿಸಲು ಕೋರಿ ಪ್ರಸ್ತುತ ಅರ್ಜಿ ಸಲ್ಲಿಸಿತ್ತು.
ನಿಯಮ 4 ರ ನಿಬಂಧನೆಯು ತಡೆಯಾಜ್ಞೆ ಕೋರುವ ಪಕ್ಷಕಾರರು ಉದ್ದೇಶಪೂರ್ವಕವಾಗಿ ಅರ್ಜಿಯಲ್ಲಿ ತಪ್ಪು ಅಥವಾ ತಪ್ಪುದಾರಿಗೆಳೆಯುವ ಹೇಳಿಕೆಯನ್ನು ನೀಡಿದರೆ ತಡೆಯಾಜ್ಞೆಯನ್ನು ತೆರವು ಮಾಡಬಹುದು ಎಂದು ಸೂಚಿಸುತ್ತದೆ.
ಮಾರಿಕೊ ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದೆ ಎಂದು ಸಾಬೀತುಪಡಿಸಲು ಕೆಎಲ್ಎಫ್ ನಿರ್ಮಲ್ ಇಂಡಸ್ಟ್ರೀಸ್ ವಿಫಲವಾಗಿದೆ ಎಂದು ತೀರ್ಮಾನಿಸಿದ ನ್ಯಾಯಮೂರ್ತಿ ಚಾಗ್ಲಾ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ತಿಳಿಸಿ ಅದನ್ನು ತಿರಸ್ಕರಿಸಿತು.
ಮಧ್ಯಂತರ ಆದೇಶ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದ್ದು ಪ್ರಕರಣವನ್ನು ಜನವರಿ 11, 2024ರಂದು ವಿಚಾರಣೆಗೆ ನಿಗದಿಪಡಿಸಲಾಗಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]