
ಸಾಂವಿಧಾನಿಕ ರಕ್ಷಣೆಗಳು ಹೇಗೆ ಸಮಾಜದ ಅಂಚಿನಲ್ಲಿರುವವರನ್ನು ಅಸ್ಪೃಶ್ಯರೆಂದು ಪರಿಗಣಿಸುವುದರಿಂದ ಸಮಾನರಾಗಿ ಗುರುತಿಸಲ್ಪಡುವಂತೆ ಪರಿವರ್ತಿಸುತ್ತವೆ ಎಂಬುದಕ್ಕೆ ತಮ್ಮ ಜೀವನವೇ ಒಂದು ಪುರಾವೆಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಶನಿವಾರ, ಹೇಳಿದರು.
ನ್ಯಾಯಮೂರ್ತಿ ಗವಾಯಿ ಅವರು ವಿಯೆಟ್ನಾಮ್‌ನ ಹನೋಯ್‌ನಲ್ಲಿ ನಡೆದ 38ನೇ ಲಾಏಷಿಯಾ ಸಮ್ಮೇಳನದಲ್ಲಿ "ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ವಕೀಲರು ಮತ್ತು ನ್ಯಾಯಾಲಯಗಳ ಪಾತ್ರ" ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು.
ಕೆಳಜಾತಿಯ ಕುಟುಂಬದಲ್ಲಿ ಜನಿಸಿದ ತಮಗೆ ಸಂವಿಧಾನವು ಕೇವಲ ರಕ್ಷಣೆಯನ್ನು ಮಾತ್ರವೇ ಅಲ್ಲದೆ ಘನತೆ, ಅವಕಾಶ ಮತ್ತು ಮನ್ನಣೆಯನ್ನು ಖಾತರಿಪಡಿಸಿತು ಎಂದು ಅವರು ತಿಳಿಸಿದರು. ಇದು ಒಳಗೊಳ್ಳುವಿಕೆ ಎನ್ನುವುದನ್ನು ಸಾಕಾರಗೊಳ್ಳಬೇಕಾದ ಆಕಾಂಕ್ಷೆಯನ್ನಾಗಿಸದೆ ಜೀವಂತ ವಾಸ್ತವವನ್ನಾಗಿಸಿತು ಎಂದು ಅವರು ಅಭಿಪ್ರಾಯಪಟ್ಟರು.
“ಕೆಳಜಾತಿಯ ಕುಟುಂಬದಲ್ಲಿ ಜನಿಸಿದ ನನಗೆ, ನಾನು ಹುಟ್ಟಿನಿಂದ ಅಸ್ಪೃಶ್ಯನಲ್ಲ ಎನ್ನುವುದನ್ನು ಇದು ತಿಳಿಸಿತು. ಸಂವಿಧಾನವು ನನ್ನ ಘನತೆಯನ್ನು ಇತರ ನಾಗರಿಕರ ಘನತೆಗೆ ಸರಿಸಮಾನವಾಗಿ ಗುರುತಿಸಿದೆ, ಅದು ರಕ್ಷಣೆಯನ್ನು ಮಾತ್ರವಲ್ಲದೆ ಅವಕಾಶ, ಸ್ವಾತಂತ್ರ್ಯ ಮತ್ತು ಸಾಮಾಜಿಕ ಮನ್ನಣೆಯ ಭರವಸೆಯನ್ನು ನೀಡುತ್ತದೆ” ಎಂದು ಸಿಜೆಐ ಹೇಳಿದರು.
ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯು ಅಮೂರ್ತ ಆದರ್ಶಗಳಲ್ಲ, ಬದಲಾಗಿ ಸಾಮಾಜಿಕ ರಚನೆಗಳಿಂದಾಗಿ ತಮ್ಮ ಅಸ್ತಿತ್ವದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇರುವ ಲಕ್ಷಾಂತರ ಜನರಿಗೆ ದೈನಂದಿನ ಅಗತ್ಯಗಳಾಗಿವೆ ಎಂದು ಸಿಜೆಐ ಒತ್ತಿ ಹೇಳಿದರು.
“ಹಾಗಾಗಿ ವೈಯಕ್ತಿಕವಾಗಿ ನನಗೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಪರಿಕಲ್ಪನೆಗಳು ನಾವು ಸಾಧಿಸಲು ಬಯಸುವ ಅಮೂರ್ತ ರಾಮರಾಜ್ಯದ ಆಶಯಗಳಲ್ಲ. ಬದಲಿಗೆ ಅನ್ಯಾಯಯುತ ಸಾಮಾಜಿಕ ರಚನೆಗಳಿಂದಾಗಿ ತಮ್ಮ ಅಸ್ತಿತ್ವದ ಮೇಲೆ ಪ್ರತಿದಿನ ನಡೆಯುವ ದಾಳಿಗಳಿಗೆ ತುತ್ತಾಗುವ ಲಕ್ಷಾಂತರ ನಾಗರಿಕರಿಗೆ ಅವು ಜೀವಂತ ಆಕಾಂಕ್ಷೆಗಳಾಗಿವೆ. ಅವುಗಳ ಮೂಲತತ್ವದಲ್ಲಿ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಇದ್ದು ಸಮಾನತೆಯನ್ನು ಪ್ರತಿನಿಧಿಸುತ್ತವೆ. ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ಅಭಿವೃದ್ಧಿ ಹೊಂದಬಹುದಾದ ನಿಜವಾದ ಸಮಾನ ಸ್ಥಳವಾಗಿ ಸಮಾಜವನ್ನು ಪರಿವರ್ತಿಸುವ ಗುರಿಯನ್ನು ಹೊಂದಿವೆ, ”ಎಂದು ಅವರು ಹೇಳಿದರು.
ಇದೇ ವೇಳೆ, ಗವಾಯಿ ಅವರು, ಗೌತಮ ಬುದ್ಧ, ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್ ಮತ್ತು ಅವರ ತಂದೆ ಆರ್ ಎಸ್ ಗವಾಯಿ ಅವರ ಜೀವನ ತಮ್ಮ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದರು. ಕಾನೂನನ್ನು ಶ್ರೇಣೀಕೃತದ ಸಾಧನದಿಂದ ಸಮಾನತೆಯ ವಾಹಕವಾಗಿ ಮರುನಿರ್ದೇಶಿಸಬೇಕಿದೆ ಎಂದು ಅಂಬೇಡ್ಕರ್ ತೋರಿಸಿದರು. ನನ್ನ ತಂದೆ ನ್ಯಾಯ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ನನ್ನೊಳಗೆ ತುಂಬಿದರು ಎಂದು ಅವರು ನೆನೆದರು.
ತಮ್ಮ ವಕೀಲಿಕೆಯ ವೇಳೆ ಈ ತತ್ವಗಳು ಹೇಗೆ ಪ್ರತಿಬಿಂಬಿತವಾದವು ಎನ್ನುವುದನ್ನು ಇದೇ ವೇಳೆ ಅವರು ಹಂಚಿಕೊಂಡರು. ವೈದ್ಯಕೀಯವನ್ನು ಓದಿರುವ ಓರ್ವ ವ್ಯಕ್ತಿಯನ್ನೂ ಹೊಂದಿಲ್ಲದ ಒಂದು ಸಮುದಾಯವನ್ನು ತಾವು ಹೇಗೆ ಪ್ರಕರಣವೊಂದರಲ್ಲಿ ಪ್ರತಿನಿಧಿಸಿದೆ ಎಂಬುದನ್ನು ಅವರು ತಿಳಿಸಿದರು. ಮೇಲುನೋಟಕ್ಕೆ ನಿಯಮಿತ ನೇಮಕಾತಿ ವಿವಾದದಂತೆ ತೋರಿದ್ದ ಪ್ರಕರಣವೊಂದು ಹೇಗೆ ಒಂದಿಡೀ ಸಮುದಾಯದ ಪಾಲಿಗೆ ಮಹತ್ವದ ಮೈಲಿಗಲ್ಲಿನ ಪ್ರಕರಣವಾಯಿತು ಎನ್ನುವುದನ್ನು ಅವರು ವಿವರಿಸಿದರು.
ವಕೀಲರಾದವರು ಪ್ರತಿಯೊಂದು ಪ್ರಕರಣವನ್ನೂ ಸಾಂವಿಧಾನಿಕ ಮೌಲ್ಯಗಳನ್ನು ವಿಸ್ತರಿಸಲು ಇರುವ ಅವಕಾಶವೆಂದು ಭಾವಿಸಬೇಕು ಎಂದು ಅವರು ಹೇಳಿದರು.
"ವಕೀಲರಾಗಿ, ನಮ್ಮ ಜವಾಬ್ದಾರಿಯು ಯಾವುದೇ ಪ್ರಕರಣದಲ್ಲಿ ಅನುಕೂಲಕರ ಫಲಿತಾಂಶವನ್ನು ಖಚಿತಪಡಿಸಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ನಾವು ಮಂಡಿಸುವ ವಾದಗಳು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ವಿಸ್ತರಿಸಲು ಕೊಡುಗೆ ನೀಡುತ್ತವೆಯೇ ಎಂಬುದರ ಬಗ್ಗೆಯೂ ನಾವು ಯೋಚಿಸಬೇಕು" ಎಂದು ಅವರು ಹೇಳಿದರು.
ನ್ಯಾಯಾಧೀಶರ ಪಾತ್ರದ ಬಗ್ಗೆ ಮಾತನಾಡುತ್ತಾ, ಮುಖ್ಯ ನ್ಯಾಯಾಧೀಶರು ಪಂಜಾಬ್ ರಾಜ್ಯ ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪರಿಶಿಷ್ಟ ಜಾತಿಗಳೊಳಗಿನ ಉಪ-ವರ್ಗೀಕರಣದ ಕುರಿತು ತಮ್ಮ ತೀರ್ಪನ್ನು ಉಲ್ಲೇಖಿಸಿದರು.
ನ್ಯಾಯಾಂಗವು ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳನ್ನು ಸಕ್ರಿಯವಾಗಿ ವಿಸ್ತರಿಸುವ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳಬೇಕು. ಕಾನೂನಿನ ಕಟ್ಟುನಿಟ್ಟಾದ ಮತ್ತು ಔಪಚಾರಿಕ ವ್ಯಾಖ್ಯಾನದ ವಿಧಾನವು ಅಸಮಾನತೆಯನ್ನು ಶಾಶ್ವತಗೊಳಿಸಬಹುದು ಎಂದೂ ಸಹ ಅವರು ಎಚ್ಚರಿಸಿದರು.
"ನ್ಯಾಯಾಧೀಶರಾಗಿ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳನ್ನು ಸಕ್ರಿಯವಾಗಿ ವಿಸ್ತರಿಸುವ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಕಾರ್ಯವಾಗಿರಬೇಕು. ಅಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಐತಿಹಾಸಿಕ ತಾರತಮ್ಯವನ್ನು ನ್ಯಾಯಾಂಗವು ಮರೆತುಬಿಡಲು ಸಾಧ್ಯವಿಲ್ಲ. ಕಾನೂನಿನ ಔಪಚಾರಿಕ ವ್ಯಾಖ್ಯಾನಗಳು ಅಜಾಗರೂಕತೆಯಿಂದ ಅಸಮಾನತೆಯನ್ನು ಶಾಶ್ವತಗೊಳಿಸಿದಾಗ, ಅವು ಸಾಮಾಜಿಕ ನ್ಯಾಯ ಮತ್ತು ಸೇರ್ಪಡೆಯ ಉದ್ದೇಶವನ್ನೇ ಹಾಳುಮಾಡುತ್ತವೆ" ಎಂದು ಅವರು ಹೇಳಿದರು.
ಅಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಐತಿಹಾಸಿಕ ತಾರತಮ್ಯವನ್ನು ನ್ಯಾಯಾಂಗವು ಮರೆತುಬಿಡಲು ಸಾಧ್ಯವಿಲ್ಲ.
ಸಿಜೆಐ ಬಿ ಆರ್ ಗವಾಯಿ
ಲಿಂಗ ಸಮಾನತೆಯ ವಿಷಯದಲ್ಲಿ ಮಹತ್ವವಾದ ವಿಶಾಖಾ ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ, ಅನುಜ್ ಗರ್ಗ್ ವರ್ಸಸ್ ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಮತ್ತು ಬಬಿತಾ ಪುನಿಯಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮುಂತಾದ ಮಹತ್ವದ ತೀರ್ಪುಗಳನ್ನು ನ್ಯಾಯಮೂರ್ತಿ ಗವಾಯಿ ಉಲ್ಲೇಖಿಸಿದರು.
ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತಾತ್ಮಕ ನೇಮಕಾತಿಯಲ್ಲಿ ಸಕಾರಾತ್ಮಕ ಪ್ರಾತಿನಿಧ್ಯದ ಕ್ರಮಗಳನ್ನು ಅವುಗಳ ಅರ್ಥ ಹಾಗೂ ಉದ್ದೇಶದ ಸಹಿತ ಜಾರಿಗೆ ತರುವುದು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು ಎಂದು ಅವರು ಹೇಳಿದರು.
ಅಂಚಿನಲ್ಲಿರುವ ಸಮುದಾಯಗಳ ಯುವ ವಕೀಲರ ಮಾರ್ಗದರ್ಶನದ ಅಗತ್ಯವನ್ನು ಅವರು ಇದೇ ವೇಳೆ ಎತ್ತಿ ತೋರಿಸಿದರು. ಸಹಾನುಭೂತಿ ಮತ್ತು ಬೆಂಬಲವಿಲ್ಲದ ಒಳಗೊಳ್ಳುವಿಕೆ ಟೊಳ್ಳಾಗುತ್ತದೆ ಎಂದು ಎಚ್ಚರಿಸಿದರು. ಒಳಗೊಳ್ಳುವಿಕೆಯು ಒಂದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
"ಅಂಚಿನಲ್ಲಿರುವ ವ್ಯಕ್ತಿಗಳು ಒಳಗೊಳ್ಳುವಿಕೆಯನ್ನು ಏಕಮುಖವಾಗಿ ಮುನ್ನಡೆಸಬೇಕೆಂದು ನಿರೀಕ್ಷಿಸುವುದು ಅನ್ಯಾಯವು ಮತ್ತು ಅಂತಿಮವಾಗಿ ನಿಷ್ಪರಿಣಾಮಕಾರಿಯೂ ಆಗುತ್ತದೆ. ನಿಜವಾದ ಒಳಗೊಳ್ಳುವಿಕೆಯು ಅಸ್ತಿತ್ವದಲ್ಲಿರುವ ಸವಲತ್ತುಗಳಿಂದ ಲಾಭ ಪಡೆದಿರುವ ಪ್ರತಿಯೊಬ್ಬರ ಸಕ್ರಿಯ ಪ್ರಯತ್ನ, ಬದ್ಧತೆ ಮತ್ತು ಹೊಣೆಗಾರಿಕೆಯನ್ನು ಬೇಡುತ್ತದೆ" ಎಂದು ಅವರು ಹೇಳಿದರು.
ಒಳಗೊಳ್ಳುವಿಕೆ ಇಲ್ಲದ ವೈವಿಧ್ಯತೆಯು ಔಪಚಾರಿಕತೆಯ ಅಪಾಯವನ್ನುಂಟು ಮಾಡುತ್ತದೆ. ಕಾನೂನನ್ನು ಅವಕಾಶಗಳ ಪ್ರವೇಶಿಕೆಯ ಭಾಷೆಯಾಗಿ ನ್ಯಾಯಾಧೀಶರು ಮತ್ತು ವಕೀಲರು ಖಾತ್ರಿಪಡಿಸಬೇಕೇ ಹೊರತು ಬೆದರಿಕೆಯ ಭಾಷೆಯಾಗಿ ಅಲ್ಲ ಎಂದು ಅವರ ಒತ್ತಿ ಹೇಳಿದರು.