ಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸುವುದು ಬದ್ಧ ಕರ್ತವ್ಯ: ಹೈಕೋರ್ಟ್‌

ಆರೋಪಿಯನ್ನು ಏಕೆ ಬಂಧಿಸಲಾಗಿದೆ ಎನ್ನುವ ಮಾಹಿತಿ ಮತ್ತು ಪ್ರಕರಣದ ವಿವರಗಳನ್ನು ಆತನಿಗೆ ತಿಳಿದಿರುವ ಭಾಷೆಗೆ ಅನುವಾದಿಸಿ ಆತನಿಗೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ, ಆತನ ಬಿಡುಗಡೆಗೆ ಆದೇಶಿಸಲಾಗುತ್ತಿದೆ ಎಂದು ತಿಳಿಸಿದ ಪೀಠ.
Justices K Somashekar and Rajesh Rai K
Justices K Somashekar and Rajesh Rai K
Published on

ಗೂಂಡಾ ಕಾಯಿದೆ ಅಡಿ ಬಂಧಿತ ಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಆತನ ಬಿಡುಗಡೆಗೆ ಆದೇಶ ಮಾಡಿದೆ.

ಬಂಧಿತ ವ್ಯಕ್ತಿ ರೋಷನ್ ಜಮೀರ್ ಅವರ ತಂದೆ ಮೊಹಮ್ಮದ್ ಶಫೀವುಲ್ಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

“ಆರೋಪಿ ಅರೇಬಿಕ್ ಶಾಲೆಯಲ್ಲಿ ಕೇವಲ ಎರಡನೇ ತರಗತಿವರೆಗೆ ಓದಿದ್ದಾನೆ. ಆತ ಮೊದಲ ಭಾಷೆಯಾಗಿ ಅರೇಬಿಕ್ ಅಥವಾ ಉರ್ದು ಮಾತ್ರ ಓದಿದ್ದಾನೆ. ಆತನಿಗೆ ಇತರೆ ಭಾಷೆಗಳು ತಿಳಿದಿಲ್ಲ. ಆದರೆ ಭಾರತೀಯ ಸಂವಿಧಾನದ 22(5)ನೇ ವಿಧಿ ಪ್ರಕಾರ ಅಧಿಕಾರಿಗಳು ಯಾವುದೇ ಬಂಧಿತ ಆರೋಪಿಗೆ ಆತನಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸುವುದು ಬದ್ಧ ಕರ್ತವ್ಯ. ಆದರೆ, ಈ ಪ್ರಕರಣದಲ್ಲಿ ವಿಫಲರಾಗಿದ್ದಾರೆ” ಎಂದು ಹೇಳಿದೆ.

ಆರೋಪಿಯನ್ನು ಏಕೆ ಬಂಧಿಸಲಾಗಿದೆ ಮತ್ತು ಪ್ರಕರಣದ ವಿವರಗಳನ್ನು ಆತನಿಗೆ ತಿಳಿದಿರುವ ಭಾಷೆಗೆ ಅನುವಾದಿಸಿ ಆತನಿಗೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ, ಆತನ ಬಿಡುಗಡೆಗೆ ಆದೇಶಿಸಲಾಗುತ್ತಿದೆ ಎಂದು ಪೀಠ ವಿವರಿಸಿದೆ.

ಅರ್ಜಿದಾರರ ಪರ ವಕೀಲರು, ಆರೋಪಿ ಕೇವಲ ಎರಡನೇ ತರಗತಿವರೆಗೆ ಉರ್ದು ಮಾಧ್ಯಮದಲ್ಲಿ ಓದಿದ್ದಾನೆ. ಆದರೆ, ಅಧಿಕಾರಿಗಳು ಆತನಿಗೆ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿದ್ದ ದಾಖಲೆಗಳನ್ನು ಮಾತ್ರ ಒದಗಿಸಿದ್ದಾರೆ. ಇದು ಸಂವಿಧಾನದ 22(5)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು.

ಆರೋಪಿಗೆ ತಿಳಿದಿರುವ ಭಾಷೆಯಲ್ಲಿ ದಾಖಲೆ ಒದಗಿಸದ ಕಾರಣ ಆತನಿಗೆ ತನ್ನನ್ನು ಏಕೆ ಬಂಧಿಸಲಾಗಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಲಾಗಿಲ್ಲ, ಜೊತೆಗೆ ಗೂಂಡಾ ಕಾಯಿದೆ ಸೆಕ್ಷನ್ 8ರಡಿ ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಿಡುಗಡೆಗೆ ಆದೇಶ ಮಾಡಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ರಾಜ್ಯ ಸರ್ಕಾರದ ವಕೀಲರು, ಆರೋಪಿ ಕಳ್ಳತನ ಹಾಗೂ ಅಪರಾಧ ಕೃತ್ಯ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ. 2013ರಿಂದ ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ಆತನ ವಿರುದ್ಧ 15 ಪ್ರಕರಣ ಬಾಕಿ ಇವೆ. ಹೀಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಗೂಂಡಾ ಕಾಯಿದೆ ವಿಧಿಸಿ ಬಂಧಿಸಲಾಗಿದೆ. ಆರೋಪಿಗೆ ಇಂಗ್ಲಿಷ್ ಮತ್ತು ಕನ್ನಡ ಭಾಷೆ ತಿಳಿದಿದೆ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಆರೋಪಿ ರೋಷನ್ ಜಮೀರ್‌ ಅಲಿಯಾಸ್‌ ಜಮ್ಮು 2013ರಿಂದ ಕಳ್ಳತನ, ದರೋಡೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಹೀಗಾಗಿ, ಆತನ ವಿರುದ್ಧ 2023ರ ಏಪ್ರಿಲ್‌ 27ರಂದು ಪೊಲೀಸರು ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು. ಅದೇ ದಿನ ಆತನನ್ನು ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದರು. ನಂತರ ಸರ್ಕಾರ ಆತನ ಬಂಧನ ಆದೇಶವನ್ನು ಕಾಯಂಗೊಳಿಸಿತ್ತು.

Attachment
PDF
Mohammad Shafiulla Vs DG and IGP.pdf
Preview
Kannada Bar & Bench
kannada.barandbench.com