
ಅಕ್ರಮದ ಹಿನ್ನೆಲೆಯಲ್ಲಿ ಬಿಹಾರ ಲೋಕ ಸೇವಾ ಆಯೋಗದ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ನಡೆಸುತ್ತಿದ್ದ ಜನ್ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಅವರನ್ನು ಆರಂಭದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಪಾಟ್ನಾ ನ್ಯಾಯಾಲಯ ಅಂತಿಮವಾಗಿ ಯಾವುದೇ ಷರತ್ತುಗಳಿಲ್ಲದೆ ಸೋಮವಾರ ಜಾಮೀನು ಮಂಜೂರು ಮಾಡಿತು.
ನ್ಯಾಯಾಧೀಶರಾದ ಆರತಿ ಉಪಾಧ್ಯಾಯ ಅವರು ಆರಂಭದಲ್ಲಿ ಕಿಶೋರ್‌ಗೆ ₹ 25,000 ಬಾಂಡ್‌ನ ಜಾಮೀನು ಮಂಜೂರು ಮಾಡಿದ್ದರು. ಭವಿಷ್ಯದಲ್ಲಿ ಯಾವುದೇ ಅಪರಾಧ ಎಸಗದಂತೆ ಇಲ್ಲವೇ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ಅವರು ಷರತ್ತು ವಿಧಿಸಿದ್ದರು.
ಆದರೆ ಪ್ರಶಾಂತ್ ಪರ ವಕೀಲರು ಬೇಷರತ್ತಾಗಿ ಜಾಮೀನು ನೀಡಬೇಕೆಂದು ಕೋರಿದರು. ಇಲ್ಲದೇ ಹೋದಲ್ಲಿ ಜಾಮೀನು ಬಾಂಡ್‌ಗೆ ಪ್ರಶಾಂತ್ ಸಹಿ ಹಾಕುವುದಿಲ್ಲ ಎಂದು ತಿಳಿಸಿದರು.
ಆದೇಶ ಪರಿಶೀಲಿಸುವ ಅಧಿಕಾರ ತನಗೆ ಇಲ್ಲ ಎಂದು ಈ ಹಂತದಲ್ಲಿ ನುಡಿದ ನ್ಯಾಯಾಲಯ ಜಾಮೀನು ಷರತ್ತನ್ನು ಒಪ್ಪದಿದ್ದರೆ ಹೈಕೋರ್ಟ್‌ಗೆ ಮೊರೆ ಹೋಗುವಂತೆ ಸೂಚಿಸಿ ಪ್ರಶಾಂತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು. ಆದರೆ ಇದೇ ನ್ಯಾಯಾಧೀಶರು ಕಡೆಗೆ ಪ್ರಶಾಂತ್ ಅವರಿಗೆ ಬೇಷರತ್ ಜಾಮೀನು ನೀಡಿದರು.
ಸೋಮವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಬಿಹಾರ ಪೊಲೀಸರು ಪ್ರಶಾಂತ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಿಹಾರ ಲೋಕಸೇವಾ ಆಯೋಗ ಇತ್ತೀಚೆಗೆ ನಡೆಸಿದ್ದ ನೇಮಕಾತಿ ಪರೀಕ್ಷೆಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪರೀಕ್ಷೆಗಳು ಸಾಕಷ್ಟು ಲೋಪದೋಷಗಳಿಂದ ಕೂಡಿದ್ದವು ಎನ್ನುವ ಆರೋಪ ಕೇಳಿ ಬಂದಿತ್ತು.
ಜನವರಿ 4 ರಂದು ಪಾಟ್ನಾದ ಬಾಪು ಪರೀಕ್ಷಾ ಪರಿಸರ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಸಂಖ್ಯೆ 12,000. ಆದರೆ, ಆಯೋಗ ಹೊರಡಿಸಿದ ಪತ್ರಿಕಾ ಪ್ರಕಟಣೆ ಕೇವಲ 5,943 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದಿತ್ತು. ಇದೆಲ್ಲವೂ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದವು.