ಬ್ರಹ್ಮಪುರಂ ಮಾಲಿನ್ಯ: ಕೇರಳ ಸರ್ಕಾರ ಸಂಪೂರ್ಣ ವಿಫಲ ಎಂದ ಎನ್‌ಜಿಟಿ, ಪಾಲಿಕೆಗೆ ₹100 ಕೋಟಿ ದಂಡ

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಾಡಬೇಕಿದ್ದ ಕರ್ತವ್ಯವನ್ನು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದ ನ್ಯಾಯಮಂಡಳಿ.
Brahmapuram fire
Brahmapuram fire
Published on

ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಆಕಸ್ಮಿಕದಿಂದ ಉಂಟಾದ ತೀವ್ರ ವಾಯುಮಾಲಿನ್ಯ ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಕೊಚ್ಚಿ ಮಹಾನಗರ ಪಾಲಿಕೆಗೆ ಶುಕ್ರವಾರ ₹ 100 ಕೋಟಿ ದಂಡ ವಿಧಿಸಿದೆ [ಘಟನೆಗೆ ಸಂಬಂಧಿಸಿದಂತೆ 06.03.2023ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಆಧರಿಸಿ ದಾಖಲಿಸಿಕೊಳ್ಳಲಾದ ಸ್ವಯಂ ಪ್ರೇರಿತ ಪ್ರಕರಣ].

ಬೆಂಕಿ ಅವಘಡ ಹಾಗೂ ಮಾಲಿನ್ಯಕ್ಕೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳಿಂದ ಉಂಟಾದ ನಿರ್ಲಕ್ಷ್ಯದ ಬಗ್ಗೆ ನ್ಯಾಯಮೂರ್ತಿಗಳಾದ ಎ ಕೆ ಗೋಯೆಲ್, ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯ ಡಾ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ.

Also Read
ಬ್ರಹ್ಮಪುರಂ ತ್ಯಾಜ್ಯ ಘಟಕದ ಅಗ್ನಿ ಆಕಸ್ಮಿಕದಿಂದ ಏಕೆ ಪಾಠ ಕಲಿಯುತ್ತಿಲ್ಲ? ಕೇರಳ ಹೈಕೋರ್ಟ್ ಅಸಮಾಧಾನ

ಕೆಲ ದಿನಗಳ ಹಿಂದೆ ಕೇರಳದ ಬಂದರು ನಗರಿ ಕೊಚ್ಚಿ ಹೊರವಲಯದಲ್ಲಿರುವ ಬ್ರಹ್ಮಪುರಂ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಿಂದಾಗಿ ಇಡೀ ನಗರ ಹೊಗೆಯಿಂದ ತತ್ತರಿಸಿತ್ತು. ಬೆಂಕಿ ನಂದಿಸಲು ನೌಕಾದಳದ ಹೆಲಿಕಾಪ್ಟರ್‌ಗಳನ್ನು ಕೂಡ ಜಿಲ್ಲಾಡಳಿತ ಬಳಸಿಕೊಂಡಿತ್ತು. ಘಟನೆಯನ್ನು ಕೇರಳ ಹೈಕೋರ್ಟ್‌ ಕೂಡ ಗಂಭೀರವಾಗಿ ಪರಿಗಣಿಸಿತ್ತು.

ನ್ಯಾಯಮಂಡಳಿ ಅವಲೋಕನದ ಪ್ರಮುಖಾಂಶಗಳು

  • ಕೇರಳ ಸರ್ಕಾರ ಮತ್ತು ಅಧಿಕಾರಿಗಳು ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಮತ್ತು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದಾರೆ.

  • ಆದರೂ ಈ ವೈಫಲ್ಯದ ಹೊಣೆಗಾರಿಕೆಯನ್ನು ಯಾರೂ ಇದುವರೆಗೆ ಹೊತ್ತಿಲ್ಲ. ಇದು ವಿಷಾದದ ಸಂಗತಿ.

  • ಪರಿಸರ ಸಂರಕ್ಷಣಾ ಕಾಯಿದೆ ಅಥವಾ ಸಂಬಂಧಪಟ್ಟ ಐಪಿಸಿ ಸೆಕ್ಷನ್‌ಗಳಡಿ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.

  • ಸುಪ್ರೀಂ ಕೋರ್ಟ್‌ ತೀರ್ಪುಗಳು, ಹಸಿರು ನ್ಯಾಯಮಂಡಳಿಯ ಆದೇಶಗಳನ್ನು ಗಾಳಿಗೆ ತೂರಲಾಗಿದೆ.

  • ಅಧಿಕಾರಿಗಳ ಇಂತಹ ಧೋರಣೆ ಕಾನೂನಾತ್ಮಕ ಆಡಳಿತಕ್ಕೆ ಬೆದರಿಕೆ.

  • ಪರಿಸ್ಥಿತಿ ಸರಿಯಾಗುತ್ತದೆ ಜೊತೆಗೆ ಸಂವಿಧಾನ ಮತ್ತು ಪರಿಸರ ಕಾನೂನಿನ ಆದೇಶಗಳನ್ನು ರಾಜ್ಯದ ಉನ್ನತ ಅಧಿಕಾರಿಗಳು ಎತ್ತಿಹಿಡಿಯುತ್ತಾರೆ ಎಂದು ನ್ಯಾಯಮಂಡಳಿ ಭಾವಿಸುತ್ತದೆ.  

  • ಸಂಪೂರ್ಣ ವೈಫಲ್ಯಕ್ಕೆ ಕಾರಣವಾದ ಅಧಿಕಾರಿಗಳನ್ನು ಗುರುತಿಸಲು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಕೈಗೊಂಡ ಕ್ರಮ ಕುರಿತು ಎರಡು ತಿಂಗಳೊಳಗೆ ಸಾರ್ವಜನಿಕವಾಗಿ ಪ್ರಕಟಿಸತಕ್ಕದ್ದು.

Kannada Bar & Bench
kannada.barandbench.com