ಬ್ರೈಲ್‌ ಪಠ್ಯ: ಇ-ಪಠ್ಯ ಮಾದರಿಗೆ ಪರಿವರ್ತಿಸಿಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌

ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡಬೇಕಿದೆ‌ ಎಂದು ನ್ಯಾಯಾಲಯಕ್ಕೆ ತಿಳಿಸಿದ ಹೈಕೋರ್ಟ್‌.
ಬ್ರೈಲ್‌ ಪಠ್ಯ: ಇ-ಪಠ್ಯ ಮಾದರಿಗೆ ಪರಿವರ್ತಿಸಿಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌
Karnataka HC and Visually impaired students

ರಾಜ್ಯದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಲಿಪಿಯ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ (ಆಡಿಯೋ ಕಂಪ್ಯಾಟಬಲ್ ಮಾದರಿಗೆ) ಪರಿವರ್ತಿಸುವ ಕಾರ್ಯ ಮಾಡುವುದಕ್ಕೆ ಕರೆಯಲಾಗಿರುವ ಟೆಂಡರ್ ಅಂತಿಮಗೊಳಿಸಲು ರಾಜ್ಯ ಸರ್ಕಾರಕ್ಕೆ ಜೂನ್ ತಿಂಗಳವರೆಗೆ ಈಚೆಗೆ ಕರ್ನಾಟಕ ಹೈಕೋರ್ಟ್ ಕಾಲಾವಕಾಶ ನೀಡಿದೆ.

ದೃಷ್ಟಿದೋಷ ಹೊಂದಿರುವ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಕೀಲ ವಿಜಯ ಕುಮಾರ್ ಪಾಟೀಲ್ ಅವರು “ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 1,692 ದೃಷ್ಟಿದೋಷ ಹೊಂದಿರುವ ಮಕ್ಕಳು ವಿವಿಧ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 500 ಪಠ್ಯ ಶೀರ್ಷಿಕೆಗಳು ಇವೆ. ಈಗಾಗಲೇ ಸದ್ಯ ಬ್ರೈಲ್ ಲಿಪಿಯ 152 ಇ-ಪಠ್ಯ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಉಳಿದಂತೆ ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಯಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡಬೇಕಿದೆ ಎಂದು ತಿಳಿಸಿದರು.

Also Read
ಬ್ರೈಲ್‌ ಪಠ್ಯ: 403 ಪುಸ್ತಕಗಳನ್ನು 2 ತಿಂಗಳಲ್ಲಿ ಇ-ಪಬ್ ಮಾದರಿಗೆ ಪರಿವರ್ತಿಸಿಲು ಹೈಕೋರ್ಟ್‌ ಗಡುವು

ಇ-ಪಠ್ಯಕ್ಕೆ ಪರಿವರ್ತಿಸುವ ಕಾರ್ಯಕ್ಕಾಗಿ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. 30 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತದ ಟೆಂಡರ್ ಇದಾಗಿದೆ. ಆದರೆ, ಎರಡು ಬಾರಿ ಕರೆದ ಇ-ಟೆಂಡರ್‌ನಲ್ಲಿ ಯಾರೊಬ್ಬರೂ ಭಾಗವಹಿಸಲಿಲ್ಲ. ಒಂದು ಬಾರಿ ಕೇವಲ ಒಬ್ಬರು ಭಾಗವಹಿಸಿದ್ದರು. ಪಠ್ಯಗಳನ್ನು ಓದಿ ಆಡಿಯೋಗೆ ಪರಿವರ್ತಿಸುವ ಕೆಲಸವಾದರೆ ಸುಲಭವಾಗಿ ಮಾಡಬಹುದಾಗಿದೆ. ಆದರೆ, ಪಠ್ಯದಲ್ಲಿರುವ ರೇಖಾಚಿತ್ರ ಮತ್ತು ಚಿತ್ರಗಳ ಬಗ್ಗೆ ವಿವರಣೆ ನೀಡಲು ನಿರ್ದಿಷ್ಟ ತಜ್ಞರು ಬೇಕಾಗಿದ್ದಾರೆ. ಅವರು ಲಭ್ಯವಾಗದ ಹಿನ್ನೆಲೆಯಲ್ಲಿ ಪಠ್ಯವನ್ನು ಆಡಿಯೊ ಆವೃತ್ತಿಗೆ ಪರಿವರ್ತಿಸುವ ಕಾರ್ಯ ವಿಳಂಬವಾಗುತ್ತಿದೆ. ನಾಲ್ಕು ವಾರ ಕಾಲಾವಕಾಶ ನೀಡಿದರೆ ಟೆಂಡರ್ ಅಂತಿಮಗೊಳಿಸಲಾಗುವುದು ಇಲ್ಲವೇ ಬೇರೆಯವರನ್ನು ಹುಡುಕಲಾಗುವುದು ಎಂದರು.

ಈ ಹೇಳಿಕೆ ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿತು. ಜತೆಗೆ, ದೃಷ್ಟಿದೋಷ ಹೊಂದಿರುವ ಮಕ್ಕಳ ಅಂಕಿ-ಅಂಶದ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ ಲಿಖಿತ ಮಾಹಿತಿ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಅವಕಾಶ ಮಾಡಿಕೊಟ್ಟಿತು.

Related Stories

No stories found.