![[ಡ್ರಗ್ಸ್ ಪ್ರಕರಣ] ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಮುಂಬೈ ಸೆಷನ್ಸ್ ಕೋರ್ಟ್](https://gumlet.assettype.com/barandbench-kannada%2F2021-10%2F3ab72796-94c0-4b0a-b4a8-55449c7725c3%2Fsessions_court_mumbai.jpg?auto=format%2Ccompress&fit=max)
ವಿಲಾಸಿ ಹಡಗಿನಲ್ಲಿ ವಶಪಡಿಸಿಕೊಳ್ಳಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಅರ್ಯನ್ ಖಾನ್ ಜಾಮೀನ ಅರ್ಜಿಯ ವಿಚಾರಣೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯವು ಬುಧವಾರ, ಅಕ್ಟೋಬರ್ 13ಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆಯು ಮುಂಬೈ ಸೆಷನ್ಸ್ ನ್ಯಾಯಾಲಯದ ಮಾದಕವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್) ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್ ಅವರ ಮುಂದೆ ಸೋಮವಾರ ನಡೆಯಿತು. ಹಿರಿಯ ವಕೀಲರಾದ ಅಮಿತ್ ದೇಸಾಯಿ ಹಾಗೂ ಸತೀಶ್ ಮಾನೆಶಿಂಧೆ ಅವರು ಆರ್ಯನ್ ಖಾನ್ ಪರ ವಾದಿಸಿದರೆ ವಿಶೇಷ ಸಾರ್ವಜನಿಕ ಅಭಿಯೋಜಕರಾದ (ಎಸ್‌ಪಿಪಿ) ಚಿಮೇಲ್ಕರ್, ಅದ್ವೈತ್ ಸೇಥ್ನಾ ಅವರು ಎನ್‌ಸಿಬಿ ಪ್ರತಿನಿಧಿಸಿದ್ದರು.
ಆರ್ಯನ್ ಖಾನ್ ಪರ ವಕೀಲರಾದ ಮಾನೆಶಿಂಧೆ ಹಾಗೂ ದೇಸಾಯಿ ಅವರು ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು (ಸೋಮವಾರ) ಮಧ್ಯಾಹ್ನ ಅಥವಾ ಮಂಗಳವಾರವೇ ನಡೆಸುವಂತೆ ಕೋರಿದರು. ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್‌ಸಿಬಿ) ತಾವು ಶುಕ್ರವಾರವೇ ಎಲೆಕ್ಟ್ರಾನಿಕ್ ಹಾಗೂ ಭೌತಿಕ ಸ್ವರೂಪದಲ್ಲಿ ಜಾಮೀಣು ಅರ್ಜಿಯನ್ನು ಎನ್‌ಸಿಬಿಗೆ ಸಲ್ಲಿಸಿರುವುದಾಗಿ ಮಾನೆಶಿಂಧೆ ತಮ್ಮ ವಾದಕ್ಕೆ ಪೂರಕವಾಗಿ ತಿಳಿಸಿದರು.
ಯಾವುದೇ ತೆರನಾದ ಅಕ್ರಮ ವಸ್ತುವನ್ನು ಅರ್ಜಿದಾರರಿಂದ ವಶಪಡಿಸಿಕೊಳ್ಳಲಾಗಿಲ್ಲ, ಅಲ್ಲದೆ ಜಾಮೀನು ನೀಡುವುದರಿಂದ ಎನ್‌ಸಿಬಿಯ ತನಿಖೆಯ ಮುಂದುವರಿಕೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ. ಜಾಮೀನು ನೀಡಿಕೆ ತನಿಖೆಯನ್ನು ನಿಲ್ಲಿಸುವುದಿಲ್ಲ. ಇದಾಗಲೇ ಅರ್ಜಿದಾರ ಹುಡುಗ (ಆರ್ಯನ್ ಖಾನ್) ಏಳು ದಿನಗಳನ್ನು ಪೊಲೀಸ್ ವಶದಲ್ಲಿ ಕಳೆದಿದ್ದಾರೆ. ಅವರ ಬಳಿಯಿಂದ ಯಾವುದೇ ಅಕ್ರಮ ವಸ್ತುವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ವಾದಿಸಿದರು.
ಮುಂದುವರೆದು, ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸಹ ಆರೋಪಿಯನ್ನು ಎನ್‌ಸಿಬಿಯ ಪೊಲೀಸ್ ಕಸ್ಟಡಿಗೆ ನೀಡಲು ನಿರಾಕರಿಸಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಹೀಗಾಗಿ ತ್ವರಿತವಾಗಿ, ಸೋಮವಾರ ಮಧ್ಯಾಹ್ನ ಅಥವಾ ಮಂಗಳವಾರವೇ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿದರು.
ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಎನ್‌ಸಿಬಿ ಪರ ವಕೀಲರು, ಆರೋಪಿ ಖಾನ್ ಪರ ವಕೀಲರು ವಾಸ್ತವ ಚಿತ್ರಣವನ್ನು ಸರಿಯಾಗಿ ನ್ಯಾಯಾಲಯದ ಮುಂದಿರಿಸುತ್ತಿಲ್ಲ. ಹೊರನೋಟಕ್ಕೆ ಕಾಣುವಷ್ಟು ಪ್ರಕರಣವು ಆಶಾದಾಯಕವಾಗಿಲ್ಲ. ಸಾಮಾನ್ಯವಾಗಿ ಎನ್‌ಸಿಬಿಯು ಇಂತಹ ಪ್ರಕರಣಗಳಲ್ಲಿ ಪ್ರತಿಕ್ರಿಯೆ ದಾಖಲಿಸಲು ಒಂದು ವಾರ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದರು. ಕನಿಷ್ಠ ಎರಡು-ಮೂರು ದಿನವಾದರೂ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶವನ್ನು ಕೇಳಿದರು.
ಇದಕ್ಕೆ ಅರ್ಜಿದಾರರ ವಕೀಲರಿಂದ ಆಕ್ಷೇಪಣೆ ಎದುರಾದಾಗ ಎಸ್‌ಪಿಪಿ ಸೇಥ್ನಾ ಅವರು, ಈ ಪ್ರಕರಣದಲ್ಲಿ ಅಂತಹ ತುರ್ತೇನೂ ಇಲ್ಲ. ನಮಗೆ ಜಾಮೀನು ಅರ್ಜಿಯು ನಿನ್ನೆಯಷ್ಟೇ ತಲುಪಿದೆ. ಸಾಮಾನ್ಯವಾಗಿ ನಾವು ಪ್ರತಿಕ್ರಿಯೆ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ತೆಗೆದುಕೊಳ್ಳುತ್ತೇವೆ. ನಮ್ಮ ವಕೀಲರು ಎರಡು ದಿನವನ್ನು ಕೇಳಿರುವುದು ನ್ಯಾಯಯುತವಾಗಿದೆ ಎಂದು ಸಮರ್ಥಿಸಿದರು.
ಅಂತಿಮವಾಗಿ ನ್ಯಾಯಾಲಯವು ಎನ್‌ಸಿಬಿಗೆ ಪ್ರತಿಕ್ರಿಯೆ ಸಲ್ಲಿಸಲು ಎರಡು ದಿಗಳ ಕಾಲಾವಕಾಶವನ್ನು ನೀಡಿ, ಪ್ರಕರಣವನ್ನು ಬುಧವಾರ ಆಲಿಸಲು ನಿರ್ಧರಿಸಿತು.
ಎನ್‌ಡಿಪಿಎಸ್‌ಗೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ಅಲಿಸುವ ವ್ಯಾಪ್ತಿಯು ವಿಶೇಷ ಸೆಷನ್ಸ್ ನ್ಯಾಯಾಲಯಕ್ಕಿದೆ ಎಂದು ಹೇಳಿ ಕಳೆದ ವಾರ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿತ್ತು.