ಸೈಲ್ ಅಫಿಡವಿಟ್‌ನಿಂದ ಅಂತರ ಕಾಯ್ದುಕೊಂಡ ಆರ್ಯನ್: ಯಾರ ವಿರುದ್ಧವೂ ಆರೋಪವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ವಿವರಣೆ

ಪ್ರಭಾಕರ್ ಸೈಲ್ ಅಥವಾ ಸಮೀರ್ ವಾಂಖೆಡೆ ಅವರ ಸಮರ್ಥನೆಗಳು/ಆರೋಪಗಳಿಂದ ಪ್ರಭಾವಕ್ಕೊಳಗಾಗದ ರೀತಿಯಲ್ಲಿ ತಮ್ಮ ಜಾಮೀನು ಅರ್ಜಿ ನಿರ್ಧರಿತವಾಗಬೇಕು ಆರ್ಯನ್‌ ಅವರು ಕೋರಿದ್ದಾರೆ.
Aryan Khan and Prabhkar Sail with Bombay HC
Aryan Khan and Prabhkar Sail with Bombay HC
Published on

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ವಿಲಾಸಿ ಹಡಗಿನ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ಗೆ ಎರಡು ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ಪ್ರಭಾಕರ್ ಸೈಲ್ ಅಥವಾ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಅಫಿಡವಿಟ್‌ನಲ್ಲಿ ಸೈಲ್ ಎತ್ತಿರುವ ಆರೋಪಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಖಾನ್‌ ಅವರು ಅಫಿಡವಿಟ್‌ ಸಲ್ಲಿಸಿದ್ದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ನೇತೃತ್ವದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

ವಿಲಾಸಿ ಹಡಗು ಮಾದಕ ವಸ್ತು ಪ್ರಕರಣದಲ್ಲಿ ಪ್ರಭಾಕರ್‌ ಸೈಲ್‌ ಸ್ವತಂತ್ರ ಸಾಕ್ಷಿಯಾಗಿದ್ದು ಅವರು ಆರ್ಯನ್‌ ಖಾನ್‌ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ರೂ 8 ಕೋಟಿ ಮೊತ್ತದ ಲಂಚದ ಗುರುತರ ಆರೋಪ ಮಾಡಿದ್ದರು. ಇದು ದೇಶದ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಪ್ರಭಾಕರ್ ಸೈಲ್ ಸ್ವತಂತ್ರ ಸಾಕ್ಷಿಯಾಗಿದ್ದು, ಅವರ ಅಫಿಡವಿಟ್ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳನ್ನು ಎತ್ತಿತ್ತು. ಅಫಿಡವಿಟ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ.

ಆರ್ಯನ್‌ ಖಾನ್‌ ಹೇಳಿರುವುದೇನು?

  • ಸೈಲ್, ವಾಂಖೆಡೆ ಮತ್ತಿತರ ವ್ಯಕ್ತಿಗಳ ನಡುವೆ ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಆರೋಪ ಪ್ರತ್ಯಾರೋಪಗಳಿಗೂ ತನಗೂ ಯಾವುದೇ ನಂಟಿಲ್ಲ.

  • ಪ್ರಾಸಿಕ್ಯೂಷನ್‌ನಲ್ಲಿ ಕೂಡ ಯಾರ ವಿರುದ್ಧವೂ ನಾನು ಯಾವುದೇ ಆರೋಪ ಮಾಡುವುದಿಲ್ಲ.

  • ಅದರಲ್ಲಿಯೂ ಸೈಲ್‌ ಹಾಗೂ ತನಗೆ ಯಾವುದೇ ರೀತಿಯ ಸಂಬಂಧವಿಲ್ಲ.

  • ಸೈಲ್ ಅಥವಾ ಸಮೀರ್ ವಾಂಖೆಡೆ ಅವರ ಸಮರ್ಥನೆಗಳು/ಆರೋಪಗಳಿಂದ ಪ್ರಭಾವಕ್ಕೊಳಗಾಗದ ರೀತಿಯಲ್ಲಿ ತಮ್ಮ ಜಾಮೀನು ಅರ್ಜಿ ನಿರ್ಧರಿತವಾಗಬೇಕು.

ಈ ಮಧ್ಯೆ ಆರ್ಯನ್‌ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಎನ್‌ಸಿಬಿ “ಆರ್ಯನ್‌ ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷ್ಯಾಧಾರಗಳನ್ನು ನಾಶ ಮಾಡಬಹುದು ಎಂದು ಹೇಳಿದೆ. ಈ ನಿಟ್ಟಿನಲ್ಲಿ ತನಿಖೆಯ ದಿಕ್ಕು ಬದಲಿಸಲು ಪ್ರಭಾಕರ್‌ ಸೈಲ್‌ ಅವರ ಅಫಿಡವಿಟ್‌ ಹರಿಯಬಿಡಲಾಗಿದೆ ಎಂದು ಅದು ಹೇಳಿದೆ.

ಬಾಂಬೆ ಹೈಕೋರ್ಟ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಯಾವುದೇ ನ್ಯಾಯಾಲಯದ ಮುಂದೆ ಸೈಲ್‌ ದಾಖಲೆಗಳನ್ನು ಸಲ್ಲಿಸಿಲ್ಲ. ಕುತೂಹಲಕರ ಸಂಗತಿ ಎಂದರೆ ಅದನ್ನು ರಹಸ್ಯವಾಗಿ ವಿತರಿಸಲಾಗಿದ್ದು ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ಮಾದಕವಸ್ತು ನಿಯಂತ್ರಣ ದಳ ಹೇಳಿಕೊಂಡಿದೆ.

Kannada Bar & Bench
kannada.barandbench.com