ಡ್ರಗ್ಸ್ ಪ್ರಕರಣ: ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 26ರಂದು ನಡೆಸಲಿರುವ ಮುಂಬೈ ಹೈಕೋರ್ಟ್‌

ಪ್ರಕರಣದ ವಿಚಾರಣೆಯನ್ನು ನಾಳೆ ಅಥವಾ ಸೋಮವಾರ ನಡೆಸಲು ಆರ್ಯನ್‌ ಪರ ವಕೀಲರು ಕೋರಿದ್ದರು.
Aryan Khan, Bombay HC
Aryan Khan, Bombay HC

ವಿಲಾಸಿ ಹಡಗು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿ (ಎನ್‌ಡಿಪಿಎಸ್) ಬಂಧಿತರಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್ ಪುತ್ರ ಆರ್ಯನ್‌ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 26 ರಂದು ಬಾಂಬೆ ಹೈಕೋರ್ಟ್ ನಡೆಸಲಿದೆ‌.

ಎನ್‌ಡಿಪಿಎಸ್‌ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ಸೆಷನ್ಸ್‌ ನ್ಯಾಯಾಲಯವು ಆರ್ಯನ್‌ ಖಾನ್ ಜಾಮೀನು ಅರ್ಜಿಯನ್ನು ಅ. 20ರಂದು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರ್ಯನ್‌ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾ. ನಿತಿನ್‌ ಸಾಂಬ್ರೆ ಅವರಿದ್ದ ಪೀಠದ ಮುಂದೆ ಹಾಜರಾದ ಖಾನ್‌ ಪರ ವಕೀಲ ಸತೀಶ್‌ ಮಾನೆಶಿಂಧೆ ಅವರು ಪ್ರಕರಣವನ್ನು ಪ್ರಸ್ತಾಪಿಸಿದರು. ಪ್ರಕರಣವನ್ನು ನಾಳೆ ಅಥವಾ ಬರುವ ಸೋಮವಾರ ಕೈಗೆತ್ತಿಕೊಳ್ಳುವಂತೆ ಮಾನೆಶಿಂಧೆ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸಾಂಬ್ರೆ ಅವರು ಮಂಗಳವಾರ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಮತ್ತೊಂದೆಡೆ ಇಂದು ಖಾನ್‌ ಅವರ ನ್ಯಾಯಾಂಗ ಬಂಧನದ ಅವಧಿಯು ಮುಕ್ತಾಯವಾಗುತ್ತಿದ್ದು, ಅದನ್ನು ವಿಸ್ತರಿಸಲು ಸೆಷನ್ಸ್‌ ನ್ಯಾಯಾಲಯದ ಮುಂದೆ ಮನವಿ ಸಲ್ಲಿಕೆಯಾಗಲಿದೆ. ಖಾನ್‌ ಅವರನ್ನು ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಗೆ ಹೊರಟಿದ್ದ ವಿಲಾಸಿ ಹಡಗಿನ ಮೇಲೆ ದಾಳಿ ನಡೆಸಿದ್ದ ಮಾದಕವಸ್ತು ನಿಯಂತ್ರಣಾ ದಳವು ವಶಕ್ಕೆ ಪಡೆದಿತ್ತು. ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಖಾನ್‌ ಅವರನ್ನು ವಶಕ್ಕೆ ಪಡೆಯಲಾಗಿತ್ತು. ‌

Related Stories

No stories found.
Kannada Bar & Bench
kannada.barandbench.com