ಮತ್ತೆ ಕೋವಿಡ್: ಸುಪ್ರೀಂ ಕೋರ್ಟ್ ನಾಲ್ವರು ನ್ಯಾಯಮೂರ್ತಿಗಳಿಗೆ ಸೋಂಕು; ಪ್ರಕರಣ ಬಾಕಿ ತಪ್ಪಿಸಲು ಪೀಠ ಪುನಾರಚನೆ

ನ್ಯಾಯಮೂರ್ತಿಗಳಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸೋಮವಾರ ಸಲಿಂಗ ವಿವಾಹ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಸಾಂವಿಧಾನಿಕ ಪೀಠವನ್ನು ಶುಕ್ರವಾರ ರಾತ್ರಿ ರದ್ದುಗೊಳಿಸಲಾಗಿದೆ.
COVID-19 preparation in Supreme Court
COVID-19 preparation in Supreme Court

ದೇಶದಲ್ಲಿ ಕೋವಿಡ್‌-19 ಸೋಂಕು ಉಲ್ಬಣಗೊಂಡಿದ್ದು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಲ್ಲಿ ವೈರಸ್‌ ಕಾಣಿಸಿಕೊಂಡಿದೆ. ಅವರಲ್ಲಿ ಒಬ್ಬರು ಇತ್ತೀಚೆಗೆ ಚೇತರಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ ಮೂಲಗಳ ಪ್ರಕಾರ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಎಸ್ ರವೀಂದ್ರ ಭಟ್, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರು  ಕೋವಿಡ್‌ನಿಂದ ಬಳಲುತ್ತಿದ್ದು  ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಒಂದು ವಾರದ ಹಿಂದೆ ಚೇತರಿಸಿಕೊಂಡಿದ್ದಾರೆ.

ನ್ಯಾ. ಭಟ್‌ ಅವರು ಗುರುವಾರದವರೆಗೆ  ನ್ಯಾಯಾಲಯದಲ್ಲಿ ಸಲಿಂಗ ವಿವಾಹ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. ಪೀಠದ ಇತರ ನಾಲ್ವರು ನ್ಯಾಯಮೂರ್ತಿಗಳ ಆರೋಗ್ಯ ಕುರಿತಂತೆ ನಿಗಾ ಇರಿಸಲಾಗಿದೆ.

ನ್ಯಾಯಮೂರ್ತಿಗಳಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸೋಮವಾರ ಸಲಿಂಗ ವಿವಾಹ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಸಾಂವಿಧಾನಿಕ ಪೀಠವನ್ನು ಶುಕ್ರವಾರ ರಾತ್ರಿ ರದ್ದುಗೊಳಿಸಲಾಗಿದೆ.

ನ್ಯಾ. ಎಸ್‌ ಕೆ ಕೌಲ್ ಅವರು ಸಹ ವೈದ್ಯಕೀಯ ತುರ್ತಿನ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗುವುದಿಲ್ಲ.

ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಕಚೇರಿಯು ಹೊಸ ದ್ವಿಸದಸ್ಯ ಪೀಠಗಳಿಗೆ ಪ್ರಕರಣವನ್ನು ನಿಯೋಜಿಸುತ್ತಿದೆ ಎಂದು ಮೂಲಗಳು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿವೆ.

ನ್ಯಾಯಮೂರ್ತಿಗಳ ಕುಟುಂಬ ಸದಸ್ಯರ ಆರೋಗ್ಯವೂ ಹದಗೆಟ್ಟಿದ್ದು ಮುಂದಿನ ಬೆಳವಣಿಗೆಗಳನ್ನು ಸುಪ್ರೀಂ ಕೋರ್ಟ್‌ ಸೂಕ್ಷ್ಮವಾಗಿ ಗಮನಿಸುತ್ತಿದೆ.

Related Stories

No stories found.
Kannada Bar & Bench
kannada.barandbench.com