ಶಿವಸೇನೆ ಪಕ್ಷದ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಚಿಹ್ನೆ ಮತ್ತು ಪಕ್ಷದ ಹೆಸರಿನ ಹಂಚಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ಸೂಚಿಸಿದೆ.
ಶಿವಸೇನೆಯ ಪಕ್ಷದ ಹೆಸರು ಮತ್ತು ಅದರ ಚಿಹ್ನೆ ತಮಗೆ ಸೇರಿದ್ದು ಎಂದು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಎಂದು ಹಕ್ಕು ಚಲಾಯಿಸಿದ್ದವು. ಆದರೆ ಯಾವುದು ಶಿವಸೇನೆಯ ನಿಜವಾದ ಬಣ ಎಂದು ನಿರ್ಧರಿಸುವವರೆಗೆ ಪಕ್ಷದ ಚಿಹ್ನೆಯಾಗಿದ್ದ ಬಿಲ್ಲು ಮತ್ತು ಬಾಣವನ್ನು ಎರಡೂ ಬಣಗಳು ಬಳಸದಂತೆ ಭಾರತೀಯ ಚುನಾವಣಾ ಆಯೋಗ ಅಕ್ಟೋಬರ್ 8 ರಂದು ಮಧ್ಯಂತರ ಆದೇಶ ನೀಡಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರು ಆದೇಶ ಹೊರಡಿಸಿದ್ದರು.
ಏಕನಾಥರಾವ್ ಸಂಭಾಜಿ ಶಿಂಧೆ (ಅರ್ಜಿದಾರ) ಮತ್ತು ಉದ್ಧವ್ ಠಾಕ್ರೆ (ಪ್ರತಿವಾದಿ) ನೇತೃತ್ವದ ಬಣಗಳು ಶಿವಸೇನಾ ಪಕ್ಷದ ಹೆಸರನ್ನು ಮತ್ತು ಬಿಲ್ಲು ಬಾಣ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ. ಎರಡೂ ಗುಂಪುಗಳು ತಮ್ಮ ಮಾತೃ ಪಕ್ಷ 'ಶಿವಸೇನಾ' ದೊಂದಿಗೆ ಸಂಪರ್ಕ ಹೊಂದಿರುವ ಹೆಸರುಗಳನ್ನು ಒಳಗೊಂಡಂತೆ ಮಧ್ಯಂತರ ಕ್ರಮವಾಗಿ ತಮಗೆ ಬೇಕಾದ ಹೆಸರುಗಳನ್ನು ಆಯ್ಕೆ ಮಾಡಬಹುದು ಎಂದು ಆದೇಶ ವಿವರಿಸಿತ್ತು.
ಉಪ ಚುನಾವಣೆಗಾಗಿ ಎರಡೂ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡಬೇಕಿರುವುದರಿಂದ ಚುನಾವಣಾ ಆಯೋಗ ಸೂಚಿಸಿದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ತಮಗೆ ಬೇಕಾದ ಚಿಹ್ನೆಯನ್ನು ಆಯ್ಕೆ ಮಾಡಬಹುದು ಎಂದು ಆಗ ತಿಳಿಸಲಾಗಿತ್ತು. ಬಳಿಕ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿಯ ಚಿಹ್ನೆ ಚುನಾವಣಾ ಗುರುತಾಗಿ ದೊರೆತಿತ್ತು. ಉರಿವ ಪಂಜನ್ನು ಉದ್ಧವ್ ಬಣ ಪಡೆದುಕೊಂಡಿತ್ತು.