ಚುನಾವಣಾ ಬಾಂಡ್‌ಗಳ ಮಾಹಿತಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ
ಸುಪ್ರೀಂ ಕೋರ್ಟ್ ಆದೇಶದನ್ವಯ ಎಸ್‌ಬಿಐ ತನಗೆ ಒದಗಿಸಿರುವ ಚುನಾವಣಾ ಬಾಂಡ್‌ಗಳ ಕುರಿತಾದ ಮಾಹಿತಿಯನ್ನು ಭಾರತೀಯ ಚುನಾವಣಾ ಆಯೋಗವು ತನ್ನ ಜಾಲತಾಣದಲ್ಲಿ ಗುರುವಾರ ಪ್ರಕಟಿಸಿದೆ. ದೇಶದ ರಾಜಕೀಯ ಪಕ್ಷಗಳು ಏಪ್ರಿಲ್ 12, 2019 ರಿಂದ ನಗದೀಕರಿಸಿದ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮಾರ್ಚ್ 12 ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು.
ಈ ಕುರಿತು ಇಸಿಐ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, "ಗೌರವಾನ್ವಿತ ಸುಪ್ರೀಂ ಕೋರ್ಟ್ ಫೆಬ್ರವರಿ 15 ಮತ್ತು ಮಾರ್ಚ್ 11, 2024ರ ತನ್ನ ಆದೇಶದಲ್ಲಿ (2017 ರ ಡಬ್ಲ್ಯುಪಿಸಿ ಸಂಖ್ಯೆ 880 ರ ವಿಷಯದಲ್ಲಿ) ನೀಡಿರುವ ನಿರ್ದೇಶನಗಳಿಗೆ ಅನುಸಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಡೇಟಾವನ್ನು ಮಾರ್ಚ್ 12, 2024 ರಂದು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಒದಗಿಸಿದೆ. ಈ ಮಾಹಿತಿಯನ್ನು ಭಾರತದ ಚುನಾವಣಾ ಆಯೋಗವು ಇಂದು ತನ್ನ ಜಾಲತಾಣದಲ್ಲಿ ಹೇಗೆ ನೀಡಲಾಗಿದೆಯೇ ಹಾಗೆ ಪ್ರಕಟಿಸಿದೆ" ಎಂದು ತಿಳಿಸಿದೆ.
ಫೆಬ್ರವರಿ 15 ರಂದು ನೀಡಿದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಚುನಾವಣಾ ಬಾಂಡ್ ಯೋಜನೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿತ್ತು ಮತ್ತು 2019 ರ ಏಪ್ರಿಲ್ 12 ರಿಂದ ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು .
ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ನ ವಿವರಗಳನ್ನು ಮಾರ್ಚ್ 6 ರೊಳಗೆ ಎಸ್‌ಬಿಐ ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.
ಅಲ್ಲದೆ, ಎಸ್‌ಬಿಐನಿಂದ ಈ ಮಾಹಿತಿಯನ್ನು ಸ್ವೀಕರಿಸಿದ ಒಂದು ವಾರದೊಳಗೆ ಚುನಾವಣಾ ಆಯೋಗವು ತನ್ನ ಅಧಿಕೃತ ಜಾಲತಾಣದಲ್ಲಿ ಈ ಮಾಹಿತಿಯನ್ನು ಪ್ರಕಟಿಸಬೇಕು ಎಂದು ನಿರ್ದೇಶಿಸಿತ್ತು.
ಆದಾಗ್ಯೂ, ಗಡುವನ್ನು ಜೂನ್ 30 ರವರೆಗೆ ವಿಸ್ತರಿಸುವಂತೆ ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ಮಾರ್ಚ್ 11 ರಂದು ಎಸ್‌ಬಿಐ ಮನವಿಯನ್ನು ವಜಾಗೊಳಿಸಿತು ಮತ್ತು ಮಾರ್ಚ್ 12ರೊಳಗೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ನಿರ್ದೇಶನ ನೀಡಿತ್ತು.
ಮಾರ್ಚ್ 13 ರಂದು, ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು (ಮಾರ್ಚ್ 12 ರೊಳಗೆ) ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನ್ಯಾಯಾಲಯವು ನೀಡಿದ್ದ ನಿರ್ದೇಶನವನ್ನು ಬ್ಯಾಂಕ್ ಪಾಲಿಸಿದೆ ಎಂದು ತಿಳಿಸಿದ್ದರು.
[ಪತ್ರಿಕಾ ಪ್ರಕಟಣೆ]