ಸಂದೇಶಗಳ ಗೂಢಲಿಪಿ (ಎನ್‌ಕ್ರಿಪ್ಷನ್) ಬಹಿರಂಗವಾದರೆ ತನ್ನ ಅಂತ್ಯ ಎದುರಾಗಲಿದೆ ಎಂದು ವಾಟ್ಸಾಪ್ ದೆಹಲಿ ಹೈಕೋರ್ಟ್‌ನಲ್ಲಿ ಗುರುವಾರ ಆತಂಕ ವ್ಯಕ್ತಪಡಿಸಿದೆ.
ಅಮೆರಿಕ ಮೂಲದ ವಾಟ್ಸಾಪ್ ಪರವಾಗಿ ವಾದಿಸಿದ ವಕೀಲ ತೇಜಸ್ ಕಾರಿಯಾ, ಜನ ವಾಟ್ಸಾಪ್ ಅನ್ನು ಬಳಸುವುದು ಅದು ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಕಾರಣಕ್ಕಾಗಿ. ಅದರಲ್ಲಿ ವಿನಿಮಯವಾಗುವ ಸಂದೇಶಗಳು ಒಂದು ತುದಿಯಿಂದ ಮತ್ತೊಂದು ತುದಿ ತಲುಪುವವರೆಗೂ ಗೂಢಲಿಪಿಯೊಳಗೆ ಅಡಕವಾಗಿರುತ್ತವೆ (ಎಂಡ್ ಟು ಎಂಡ್ ಎನ್‌ಕ್ರಿಪ್ಷನ್) ಎಂದು ಹೇಳಿದರು.
“ಗೂಢಲಿಪಿಯನ್ನು ಯಾರಾದರೂ ಬಹಿರಂಗಪಡಿಸಬೇಕು ಎಂದು ಹೇಳಿದರೆ ಅಲ್ಲಿಗೆ ವಾಟ್ಸಾಪ್ ಸಂದೇಶ ಕಳುಹಿಸುವ ವೇದಿಕೆಯಾಗಿ ಅಂತ್ಯಗೊಂಡಂತೆ ಎಂದು ಕಾರಿಯಾ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ಪೀಠಕ್ಕೆ ತಿಳಿಸಿದರು.
ಮಾಹಿತಿ ತಂತ್ರಜ್ಞಾನ (ಮಧ್ಯಸ್ಥದಾರರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) 2021ರ ನಿಯಮಾವಳಿ 4(2)ನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಫೇಸ್‌ಬುಕ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ವಾಟ್ಸಾಪ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ತನ್ನ ಕಂಪ್ಯೂಟರ್ ಸಂಪನ್ಮೂಲದಲ್ಲಿನ ಮಾಹಿತಿಯ ಮೊದಲ ಮೂಲ ಯಾರು ಎಂಬುದನ್ನು ಗುರುತಿಸಲು ನ್ಯಾಯಾಲಯ ಇಲ್ಲವೇ ಸಕ್ಷಮ ಪ್ರಾಧಿಕಾರ ಆದೇಶ ನೀಡಿದಾಗ ಅದನ್ನು ಬಹಿರಂಗಪಡಿಸಬೇಕು ಎಂದು ನಿಯಮಾವಳಿ 4(2) ತಿಳಿಸುತ್ತದೆ.
ಯಾವ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ತಿಳಿಯದೇ ಇರುವುದರಿಂದ ಎಲ್ಲಾ ಸಂದೇಶಗಳನ್ನೂ ವಾಟ್ಸಾಪ್ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಹಲವು ವರ್ಷಗಳವರೆಗೆ ಲಕ್ಷಾಂತರ ಸಂದೇಶಗಳನ್ನು ಸಂಗ್ರಹಿಸಿಟ್ಟುಕೊಳ್ಳವುದು ಅನಿವಾರ್ಯವಾಗಲಿದೆ. ಇಂತಹ ವ್ಯವಸ್ಥೆ ಬ್ರೆಜಿಲ್ ಸೇರಿದಂತೆ ಜಗತ್ತಿನ ಬೇರೆಲ್ಲೂ ಇಲ್ಲ. ಮೂಲ ಕಾನೂನಾದ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ನಿಯಮ ಉಲ್ಲಂಘಿಸುತ್ತದೆ. ಕಾಯಿದೆಯಲ್ಲಿ ಗೂಢಲಿಪಿ ಬಹಿರಂಗಪಡಿಸುವಂತೆ ತಿಳಿಸಿಲ್ಲ ಎಂದು ವಕೀಲರು ವಿವರಿಸಿದರು.
ಈ ಮಧ್ಯೆ ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಕೀರ್ತಿಮಾನ್ ಸಿಂಗ್ ಅವರು ವಾದ ಮಂಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ಸಂಭವಿಸಬಹುದಾದ ವಿಷಯಗಳು ಜನರಿಗೆ ತಿಳಿದಿವೆ ಮತ್ತು ಸಂದೇಶದ ಮೂಲವನ್ನು ಪತ್ತೆಹಚ್ಚುವುದು ನಿಯಮದ ಹಿಂದಿನ ಆಲೋಚನೆಯಾಗಿದೆ ಎಂದು ಪ್ರತಿಪಾದಿಸಿದರು.
ಅಂತಿಮವಾಗಿ, ಸಂದೇಶಗಳನ್ನು ಪತ್ತೆಹಚ್ಚಲು ಕೆಲವು ಕಾರ್ಯವಿಧಾನಗಳು ಇರಬೇಕು ಏಕೆಂದರೆ ಅದು ಈಗಿನ ಅಗತ್ಯವಾಗಿದ್ದು ಅಮೆರಿಕದ ಸಂಸತ್ತಿನ ಮುಂದೆ ವಾಟ್ಸಾಪ್ ಕೆಲವು ಕಷ್ಟಕರವಾದ ಪ್ರಶ್ನೆಗಳನ್ನು ಎದುರಿಸಿದೆ ಎಂದು ಸಿಂಗ್ ಹೇಳಿದರು.
ನ್ಯಾಯಾಲಯ ಅಂತಿಮವಾಗಿ ಪ್ರಕರಣವನ್ನು ಆಗಸ್ಟ್ 14ಕ್ಕೆ ಮುಂದೂಡಿತು ಮತ್ತು ಸುಪ್ರೀಂ ಕೋರ್ಟ್‌ನಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾದ ಪ್ರಕರಣಗಳೊಂದಿಗೆ ಈ ಎರಡು ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.