ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಾಗುವ ಗೇಟ್ 2022 ಪರೀಕ್ಷೆ ಮುಂದೂಡಿಕೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಇದು ಸರ್ಕಾರದ ನೀತಿನಿರೂಪಣೆಯ ಭಾಗವಾಗಿದ್ದು ಸರ್ಕಾರದ ಪ್ರಾಧಿಕಾರಿಗಳು ಈ ಬಗ್ಗೆ ನಿರ್ಧರಿಸಬೇಕಿದೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶವು ಗೊಂದಲಕ್ಕೆ ಕಾರಣವಾಗಲಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ವಿಕ್ರಂನಾಥ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
"ಗೇಟ್ ಪರೀಕ್ಷೆಗಳು ಫೆ. 5ರಿಂದ ಆರಂಭವಾಗಲಿದ್ದು ಅದಕ್ಕಿಂತ ಕೇವಲ 48 ಗಂಟೆಗಳ ಮೊದಲು ಪರೀಕ್ಷೆಯನ್ನು ಮುಂದೂಡಲು ಮನವಿ ಮಾಡಿರುವುದು ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಅನಿಶ್ಚಿತತೆ ಹಾಗೂ ಗೊಂದಲಕ್ಕೆ ಕಾರಣವಾಗಲಿದೆ. ಈ ನ್ಯಾಯಾಲಯವು ಪ್ರಾಧಿಕಾರದ ಅಧಿಕಾರವನ್ನು ಸಂವಿಧಾನ 32ನೇ ವಿಧಿಯಡಿ ಏಕೆ ಆಕ್ರಮಿಸಬೇಕು ಎನ್ನುವುದಕ್ಕೆ ವ್ಯಾಪಕ ಕಾರಣಗಳು ಇಲ್ಲ," ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಗೇಟ್ 2022 ಪರೀಕ್ಷೆಗಳು ಇದೇ ಫೆಬ್ರವರಿ 5, 6, 12 ಮತ್ತು 13ರಂದು ಭೌತಿಕವಾಗಿ ನಡೆಯಲಿವೆ.