ನ್ಯಾಯಮೂರ್ತಿ ನಿಖಿಲ್ ಎಸ್ ಕರಿಯೆಲ್ ಅವರನ್ನು ಗುಜರಾತ್‌ನಿಂದ ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಎಚ್‌ಸಿಎಎ) ಅನಿರ್ದಿಷ್ಟಾವಧಿಯವರೆಗೆ ಕೆಲಸದಿಂದ ದೂರವಿರಲು ನಿರ್ಧರಿಸಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಕರೆದಿದ್ದ ಜಿಎಚ್‌ಸಿಎಎ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರ್ಗಾವಣೆ ವಿರೋಧಿಸಿ ಗುಜರಾತ್ ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದಿರುವ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲು ಕೂಡ ಸಂಘ ನಿರ್ಧರಿಸಿದೆ. ಅಲ್ಲದೆ ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ತಮ್ಮ ಅಳಲನ್ನು ತಿಳಿಸುವಂತೆ ಕೋರಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆಯಲು ತೀರ್ಮಾನಿಸಲಾಗಿದೆ.
ನ್ಯಾ. ಕರಿಯೆಲ್ ಅವರ ವರ್ಗಾವಣೆ ಸುದ್ದಿ ತಿಳಯುತ್ತಿದ್ದಂತೆ ಹಿರಿಯ ನ್ಯಾಯವಾದಿಗಳೂ ಸೇರಿದಂತೆ ನೂರಾರು ವಕೀಲರು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಭಾಂಗಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ತರುವಾಯ, ಮಧ್ಯಾಹ್ನ 2 ಗಂಟೆಗೆ ಸಭೆ ಸೇರಿದ ಸಂಘ ಕೆಲಸದಿಂದ ದೂರವಿರಲು ನಿರ್ಧರಿಸಿತು.