2021ರ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದ ನೀಟ್ ಫಲಿತಾಂಶ ಘೋಷಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದ್ದು ಆ ಮೂಲಕ ಫಲಿತಾಂಶ ಘೋಷಣೆಗೆ ತಡೆಯೊಡ್ಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ.
ಸೆಪ್ಟೆಂಬರ್ 12ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಪರೀಕ್ಷಾ ಬುಕ್‌ಲೆಟ್‌ಗಳು ಕೆಳಗೆ ಬಿದ್ದ ಪರಿಣಾಮ ಒಎಂಆರ್ ಶೀಟ್‌ಗಳು ಬೆರಕೆಯಾಗಿವೆ ಎಂದು ಆರೋಪಿಸಿ ಇಬ್ಬರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಿಸದಂತೆ ಎನ್‌ಟಿಎಗೆ ಬಾಂಬೆ ಹೈಕೋರ್ಟ್ ಸೂಚಿಸಿತ್ತು.
"ನಾವು ಹೈಕೋರ್ಟ್ ತೀರ್ಪಿಗೆ ತಡೆ ನೀಡುತ್ತೇವೆ. ನೀಟ್ ಪದವಿ ಫಲಿತಾಂಶಗಳನ್ನು ಎನ್‌ಟಿಎ ಪ್ರಕಟಿಸಬಹುದು" ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ದಿನೇಶ್ ಮಹೇಶ್ವರಿ ಹಾಗೂ ಬಿ ಆರ್ ಗವಾಯಿ ಅವರಿದ್ದ ತ್ರಿಸದಸ್ಯ ಪೀಠ ಇಂದು ಆದೇಶ ನೀಡಿದೆ.
ಇಬ್ಬರು ವಿದ್ಯಾರ್ಥಿಗಳ ಸಮಸ್ಯೆ ಪರಿಶೀಲಿಸೋಣ ಆದರೆ 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಬ್ಬರು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇರುವ ಯಾವುದೇ ಗೊಂದಲ ಸರಿಪಡಿಸಲಾಗುವುದು ಆದರೆ ಇತರ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಬಾರದು ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಫಲಿತಾಂಶ ಪ್ರಕಟಿಸಲು ಎನ್‌ಟಿಎಗೆ ಅನುಮತಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ನೋಟಿಸ್ ನೀಡಿತು. ಸೆಪ್ಟೆಂಬರ್ 12ರಂದು ನಡೆದ ನೀಟ್ ಪರೀಕ್ಷೆಯ ಫಲಿತಾಂಶದೊಂದಿಗೆ ಅರ್ಜಿದಾರರ ಮರುಪರೀಕ್ಷೆಯ ಫಲಿತಾಂಶವನ್ನು ಘೋಷಿಸಲು ಎನ್‌ಟಿಎಗೆ ಸೂಚಿಸಲಾಯಿತು.