ಟೂಲ್‌ಕಿಟ್‌ ಪ್ರಕರಣ: ಜಾಮೀನು ಕೋರಿ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಶಂತನು ಮುಲುಕ್

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಫೆಬ್ರವರಿ 24ರಂದು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
Shantanu Muluk and Delhi Police
Shantanu Muluk and Delhi Police
Published on

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದಾಖಲಿಸಿರುವ ಟೂಲ್‌ಕಿಟ್ ಪ್ರಕರಣದ ಆರೋಪಿ ಶಂತನು ಮುಲುಕ್‌ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಫೆಬ್ರವರಿ 24ರಂದು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಫೆಬ್ರವರಿ 17 ರಂದು ಬಾಂಬೆ ಹೈಕೋರ್ಟ್ ಹತ್ತು ದಿನಗಳ ಅವಧಿಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು (ಆರೋಪಿಯು ಪ್ರಕರಣದ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ನ್ಯಾಯಾಲಯವನ್ನು ಎಡತಾಕುವವರೆಗೆ ಮತ್ತೊಂದು ನ್ಯಾಯಾಲಯವು ಆರೋಪಿಯನ್ನು ಬಂಧನಕ್ಕೆ ಪಡೆಯದಂತೆ ರಕ್ಷಣೆ ನೀಡಿ ಕೊಡುವ ಜಾಮೀನು; ಅಂತರರಾಜ್ಯ ಪ್ರಕರಣಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ) ನೀಡಿದ್ದು ನಂತರ ಶಂತನು ತನಿಖೆಗೆ ಒಳಪಟ್ಟಿದ್ದರು. ಭಾರತಕ್ಕೆ ಕಳಂಕ ತರಲು ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಖಲಿಸ್ತಾನ ಗುಂಪುಗಳ ಪರವಾಗಿ ಟೂಲ್‌ಕಿಟ್‌ ರೂಪಿಸಿದ್ದಾರೆ ಎಂಬುದು ಶಂತನು ವಿರುದ್ಧ ದೆಹಲಿ ಪೊಲೀಸರು ಮಾಡಿರುವ ಆರೋಪ.

Also Read
ಟೂಲ್‌ಕಿಟ್‌ ಪ್ರಕರಣ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

22 ವರ್ಷ ವಯೋಮಾನದ ಪರಿಸರ ಕಾರ್ಯಕರ್ತೆ ದಿಶಾ ರವಿ ಮತ್ತು ವಕೀಲೆ ನಿಕಿತಾ ಜೇಕಬ್‌ ಅವರು ಪ್ರಕರಣದ ಇತರೆ ಆರೋಪಿಗಳಾಗಿದ್ದು ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ದಿಶಾ ಅವರಿಗೆ ಮಂಗಳವಾರ ಜಾಮೀನು ನೀಡಿದ್ದಾರೆ.

ಪರಿಸರ ಉಳಿವಿಗೆ ಶ್ರಮಿಸುವ ಎಕ್ಸ್‌ಆರ್ ಇಂಡಿಯಾದ ಸಂಸ್ಥಾಪಕರಲ್ಲಿ ಮುಲುಕ್ ಒಬ್ಬರಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾಹಿತಿ ಪ್ರದರ್ಶಿಸುವ ಆನ್‌ಲೈನ್‌ ವೇದಿಕೆಯೊಂದರ ಸೃಷ್ಟಿಕರ್ತ ಇವಾರಾಗಿದ್ದಾರೆ. ವೇದಿಕೆಯಲ್ಲಿ ಶಾಂತಿಯುತ ಪ್ರತಿಭಟನೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿತ್ತು.

ತಾನು ಮತ್ತು ತನ್ನ ಸಹವರ್ತಿಗಳು ನಿರಪರಾಧಿಗಳಾಗಿದ್ದು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಒಳ್ಳೆಯ ಉದ್ದೇಶ ಹೊಂದಿದ್ದಾಗಿ ಈ ಮುನ್ನ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಅವರು ವಾದಿಸಿದ್ದರು.

Kannada Bar & Bench
kannada.barandbench.com