ಆಫ್‌ಲೈನ್‌ ವಿಧಾನದಲ್ಲಿ ಬೋರ್ಡ್ ಪರೀಕ್ಷೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋದ 15 ರಾಜ್ಯಗಳ ವಿದ್ಯಾರ್ಥಿಗಳು

ಕೋವಿಡ್ ಪರಿಸ್ಥಿತಿ ಮತ್ತು ಶಾಲಾ ಶಿಕ್ಷಣದಲ್ಲಿನ ಅಡಚಣೆಗಳಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆ ಮತ್ತು ಒತ್ತಡಗಳನ್ನು ಮನವಿಯಲ್ಲಿ ಎತ್ತಿ ತೋರಿಸಲಾಗಿದೆ.
www.youthkiawaaz.com

www.youthkiawaaz.com

Published on

ವಿವಿಧ ರಾಜ್ಯ ಮಂಡಳಿಗಳು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪರೀಕ್ಷೆಗಳ ಬದಲಿಗೆ ಪರ್ಯಾಯ ಮೌಲ್ಯಮಾಪನ ವಿಧಾನ ಜಾರಿಗೆ ತರುವಂತೆ ಕೋರಿ ದೇಶದ ಹದಿನೈದಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಒಡಿಶಾ ವಿದ್ಯಾರ್ಥಿ ಒಕ್ಕೂಟದ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ “ವಿದ್ಯಾರ್ಥಿಗಳು ಅನೇಕ ಸಮವಾಲುಗಳನ್ನು ಎದುರಿಸುತ್ತಿರುವುದರಿಂದ ನಿಗದಿತ ಸಮಯದೊಳಗೆ ಫಲಿತಾಂಶ ಘೋಷಿಸಲು ಮತ್ತು ಸುಧಾರಣಾ ಪರೀಕ್ಷೆಯ ಆಯ್ಕೆ ಒದಗಿಸಲು ನಿರ್ದೇಶಿಸಬೇಕು” ಎಂದು ಕೂಡ ಕೋರಲಾಗಿದೆ.

Also Read
ನೀಟ್ ಪಿಜಿ ಪರೀಕ್ಷೆ: ಮೀಸಲಾತಿ ಅರ್ಹತೆಗೆ ವಿರುದ್ಧವಲ್ಲ ಎಂದ ಸುಪ್ರೀಂ, ಒಬಿಸಿ ಮೀಸಲಾತಿ ಎತ್ತಿಹಿಡಿದು ವಿವರವಾದ ಆದೇಶ

ಅರ್ಜಿಯ ಪ್ರಮುಖ ಅಂಶಗಳು

  • ಸಿಬಿಎಸ್‌ಇಗೆ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಲಿದ್ದು ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಇನ್ನೂ ಯಾವುದೇ ಅಧಿಸೂಚನೆ ನೀಡಿಲ್ಲ. ರಾಜ್ಯ ಮಂಡಳಿಗಳಿಗೆ ಸಂಬಂಧಿಸಿದಂತೆ ಕೆಲವರು ವೇಳಾಪಟ್ಟಿ ಪ್ರಕಟಿಸಿದ್ದಾರೆ, ಇನ್ನೂ ಕೆಲವರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

  • ರಾಜ್ಯ ಸರ್ಕಾರ ಮತ್ತು ಇತರ ಮಂಡಳಿಗಳ ಈ ರೀತಿಯ ನಡವಳಿಕೆಯಿಂದ ವಿದ್ಯಾರ್ಥಿಗಳು ಅತೃಪ್ತರಾಗಿದ್ದು ಅವರ ಭವಿಷ್ಯ ಮತ್ತು ವೃತ್ತಿಜೀವನದ ಬಗ್ಗೆ ಒತ್ತಡಗೊಂಡು ಚಿಂತಿತರಾಗಿದ್ದಾರೆ.

  • ಕೋವಿಡ್ ಪರಿಸ್ಥಿತಿ ಮತ್ತು ಶಾಲಾ ಶಿಕ್ಷಣದಲ್ಲಿನ ಅಡಚಣೆಗಳಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ.

  • ಕೋವಿಡ್‌ ಮೂರನೇ ಅಲೆ ಉಲ್ಬಣಗೊಂಡಿರುವಾಗಲೇ ಪರೀಕ್ಷೆ ನಡೆಸುವುದರಿಂದ ಯುವಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮಾತ್ರವಲ್ಲ ಅವರ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ

  • ಶಿಕ್ಷಣ ಮುಖ್ಯವಾಗಿದ್ದರೂ ಭೌತಿಕವಾಗಿ ಪರೀಕ್ಷೆ ಎದುರಿಸಬೇಕಿರುವ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರ ಜೀವ ಮತ್ತು ಮಾನಸಿಕ ಆರೋಗ್ಯಕ್ಕಿಂತ ಇದು ಮುಖ್ಯವಲ್ಲ.

  • ಭೌತಿಕವಾಗಿ ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಬೇಕು.

  • ವಿವಿಧ ವಿಶ್ವವಿದ್ಯಾಲಯಗಳಿಗೆ ಪ್ರವೇಶಾತಿ ದಿನಾಂಕ ಘೋಷಿಸಲು ಮತ್ತು ವೃತ್ತಿಪರವಲ್ಲದ ಕೋರ್ಸ್‌ಗಳಲ್ಲಿ ಹೆಚ್ಚಿನ ಅಧ್ಯಯನ ಬಯಸುವ 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನಕ್ಕೆ ಸೂತ್ರವೊಂದನ್ನು ರೂಪಿಸುವ ಸಲುವಾಗಿ ಸಮಿತಿ ರಚನೆಗೆ ಯುಜಿಸಿಗೆ ಸೂಚನೆ ನೀಡಬೇಕು.

Kannada Bar & Bench
kannada.barandbench.com