ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು (ಅಥವಾ ದೊಡ್ಡ ವಿರೋಧ ಪಕ್ಷದ ನಾಯಕ) ಒಳಗೊಂಡಿರುವ ಸಮಿತಿಯ ಸಲಹೆಯ ಮೇರೆಗೆ ಭಾರತದ ಚುನಾವಣಾ ಆಯೋಗದ ಸದಸ್ಯರ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ [ಅನೂಪ್ ಬರನ್ವಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗೆ ಸಂಬಂಧಿಸಿದ ಕೇಂದ್ರ ಸರ್ಕಾರ ಕಾನೂನನ್ನು ರೂಪಿಸುವವರೆಗೆ ಈ ವ್ಯವಸ್ಥೆಯೇ ಜಾರಿಯಲ್ಲಿರಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಸಾಂವಿಧಾನಿಕ ಪೀಠ ಹೇಳಿದೆ.
“ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ, ಒಂದು ವೇಳೆ ಅಧಿಕೃತ ವಿರೋಧಪಕ್ಷವಾಗಲು ಸಾಕಷ್ಟು ಸಂಖ್ಯಾಬಲವಿಲ್ಲದ ವೇಳೆ ಅತಿದೊಡ್ಡ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಸಮಿತಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಬೇಕು” ಎಂದು ನ್ಯಾಯಾಲಯ ತಿಳಿಸಿದೆ.
ತೀರ್ಪಿನ ಪ್ರಕಟಣೆಯ ದೃಶ್ಯವನ್ನು ಇಲ್ಲಿ ಗಮನಿಸಬಹುದು:
ಸಂಸತ್ತು ಕಾನೂನು ರೂಪಿಸುವವರೆಗೂ ಈ ಕಾನೂನು ಉತ್ತಮವಾಗಿರಲಿದೆ. ಭಾರತದ ಸಂಚಿತ ನಿಧಿಯಿಂದ ಚುನಾವಣಾ ಆಯೋಗಕ್ಕೆ ಧನಸಹಾಯ ಮಾಡುವುದು ಮತ್ತು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಅವಶ್ಯಕತೆಗೆ ಸಂಬಂಧಿಸಿದಂತೆ ಅಗತ್ಯ ಬದಲಾವಣೆಗಳನ್ನು ಮಾಡಲು ನ್ಯಾಯಾಲಯ ಸರ್ಕಾರಕ್ಕೆ ತಿಳಿಸಿದೆ.
ಸಂವಿಧಾನದ 324(2)ನೇ ವಿಧಿ ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರವನ್ನು ಕಾರ್ಯಾಂಗ ಅನುಭವಿಸುತ್ತಿದೆ ಎಂಬ ಆಧಾರದ ಮೇಲೆ ಆಯೋಗದ ಸದಸ್ಯರನ್ನು ನೇಮಿಸುವ ಪ್ರಸ್ತುತ ವ್ಯವಸ್ಥೆಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ,