ಹಿರಿಯ ನ್ಯಾಯವಾದಿ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ತಾನು ನವೆಂಬರ್ 2021ರಂದು ಮಾಡಿದ್ದ ಶಿಫಾರಸನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಪುನರುಚ್ಚರಿಸಿದೆ. ಸಲಿಂಗಾಸಕ್ತಿಯ ಮನೋಧರ್ಮದ ಕಿರ್ಪಾಲ್ ಅವರ ಕುರಿತು ಇದೇ ವೇಳೆ ಅದು ʼತಮ್ಮ ಲೈಂಗಿಕ ದೃಷ್ಟಿಕೋನದ ಬಗ್ಗೆ ಮುಕ್ತವಾಗಿ ಧ್ವನಿಸುವುದು ಅವರೆಡೆಗಿನ ಗೌರವಕ್ಕೆ ಪೂರಕವಾಗಿದೆʼ ಎಂದು ತಿಳಿಸಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಲೈಂಗಿಕ ಮನೋಧರ್ಮದ ಆಧಾರದ ಮೇಲೆ ತನ್ನದೇ ಆದ ಘನತೆ ಮತ್ತು ಪ್ರತ್ಯೇಕತೆ ಕಾಪಾಡಿಕೊಳ್ಳಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಮಾಡಿರುವ ಈ ಪುನರ್ ಪ್ರತಿಪಾದನೆ ಎತ್ತಿ ತೋರಿಸಿದೆ.
"ಶ್ರೀ ಸೌರಭ್ ಕಿರ್ಪಾಲ್ ಅವರು ತಮ್ಮ ಲೈಂಗಿಕ ಮನೋಧರ್ಮದ ಬಗ್ಗೆ ಮುಕ್ತವಾಗಿರುವುದು ಅವರೆಡೆಗಿನ ವಿಶ್ವಾಸಕ್ಕೆ ಪೂರಕವಾಗಿದೆ. ನ್ಯಾಯಾಮೂರ್ತಿ ಹುದ್ದೆಯ ಅಭ್ಯರ್ಥಿಯಾಗಿ, ಅವರು ತಮ್ಮ ದೃಷ್ಟಿಕೋನದ ಬಗ್ಗೆ ಮುಚ್ಚುಮರೆ ಮಾಡಲಿಲ್ಲ" ಎಂದು ಪ್ರಕಟಣೆ ತಿಳಿಸಿದೆ.
ಕಿರ್ಪಾಲ್ ಅವರ ನೇಮಕಾತಿಯು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಕ್ಕೆ ಮೌಲ್ಯ ತರಲಿದ್ದು ಈ ನೇಮಕಾತಿ ಒಳಗೊಳ್ಳುವಿಕೆ ಮತ್ತು ವೈವಿಧ್ಯವನ್ನು ಒದಗಿಸುತ್ತದೆ ಎಂದು ಅದು ತಿಳಿಸಿದೆ.
“ಅಭ್ಯರ್ಥಿಯ ಸಾಂವಿಧಾನಿಕ ಮನ್ನಣೆ ಪಡೆದ ಹಕ್ಕುಗಳ ದೃಷ್ಟಿಯಿಂದ ಅವರ ಅಭ್ಯರ್ಥಿತನ ತಿರಸ್ಕರಿಸುವುದು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಾಂವಿಧಾನಿಕ ತತ್ವಗಳಿಗೆ ಸ್ಪಷ್ಟವಾಗಿ ವಿರುದ್ಧವಾಗುತ್ತದೆ. ಶ್ರೀ ಸೌರಭ್ ಕಿರ್ಪಾಲ್ ಅವರಿಗೆ ಸಾಮರ್ಥ್ಯ, ಪ್ರಾಮಾಣಿಕತೆ ಹಾಗೂ ಬೌದ್ಧಿಕತೆ ಇದೆ” ಎಂದು ಕೊಲಿಜಿಯಂ ವಿವರಿಸಿದೆ.
ಎರಡು ಆಕ್ಷೇಪಣೆಗಳನ್ನೆತ್ತಿ ಕೇಂದ್ರ ಸರ್ಕಾರ ಕಿರ್ಪಾಲ್ ಅವರಿಗೆ ಪದೋನ್ನತಿ ತಿರಸ್ಕರಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೊಲಿಜಿಯಂ ಈ ವಿವರಣೆ ನೀಡಿದೆ. ಈ ಆಕ್ಷೇಪಣೆಗಳಲ್ಲಿ ಒಂದು ಕಿರ್ಪಾಲ್ ಅವರು ತಮ್ಮ ಲೈಂಗಿಕ ದೃಷ್ಟಿಕೋನದ ಬಗ್ಗೆ ಮುಕ್ತವಾಗಿರುವುದಕ್ಕೆ ಸಂಬಂಧಿಸಿದ್ದಾಗಿತ್ತು. ಮತ್ತೊಂದು ಬೇಹುಗಾರಿಕಾ ಸಂಸ್ಥೆ 'ರಾ' ಕಿರ್ಪಾಲ್ ಅವರ ಸಂಗಾತಿ ಸ್ವಿಸ್ ನಾಗರಿಕತ್ವ ಹೊಂದಿರುವುದರ ಬಗ್ಗೆ ಬೆರಳು ಮಾಡಿರುವುದಾಗಿತ್ತು.
ಈ ವಿಚಾರದಲ್ಲಿ ಭಾರತದೊಂದಿಗೆ ಸ್ನೇಹಶೀಲ ರಾಷ್ಟ್ರವಾಗಿರುವ ಸ್ವಿಟ್ಜರ್ಲ್ಯಾಂಡ್‌ನ ನಾಗರಿಕತ್ವ ಪ್ರಶ್ನೆಯೊಡ್ಡದು ಎಂದು ಕೊಲಿಜಿಯಂ ಅಭಿಪ್ರಾಯಪಟ್ಟಿದೆ. ಅಲ್ಲದೆ, ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವ ಅನೇಕರ ಸಂಗಾತಿಗಳು ವಿದೇಶಿ ನಾಗರಿಕತ್ವ ಹೊಂದಿದ್ದ ಹಾಗೂ ಹೊಂದಿರುವ ಬಗ್ಗೆ ಅದು ಗಮನಸೆಳೆದಿದೆ.