ಪ. ಬಂ. ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆ ಪ್ರಶ್ನಿಸಿ ರಾಜ್ಯದ ಮನವಿ; ಕೇಂದ್ರಕ್ಕೆ ಸುಪ್ರೀಂ ನೋಟಿಸ್

ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಕೇಂದ್ರ ಮತ್ತಿತರ ಪ್ರತಿವಾದಿಗಳ ಪ್ರತಿಕ್ರಿಯೆ ಕೋರಿದ್ದು ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಅಕ್ಟೋಬರ್ 7ಕ್ಕೆ ಮುಂದೂಡಿತು.
ಪ. ಬಂ. ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆ ಪ್ರಶ್ನಿಸಿ ರಾಜ್ಯದ ಮನವಿ; ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರದ ವೇಳೆ ನಡೆದ ಕೊಲೆ, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶಿಸಿದ್ದ ಕಲ್ಕತ್ತಾ ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಕೇಂದ್ರ ಮತ್ತಿತರ ಪ್ರತಿವಾದಿಗಳ ಪ್ರತಿಕ್ರಿಯೆ ಕೋರಿದ್ದು ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಅಕ್ಟೋಬರ್ 7ಕ್ಕೆ ಮುಂದೂಡಿತು.

Also Read
[ಚುನಾವಣೋತ್ತರ ಹಿಂಸಾಚಾರ] ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು: ಸುಪ್ರೀಂಗೆ ಪಶ್ಚಿಮ ಬಂಗಾಳ ಸರ್ಕಾರದ ವಿವರಣೆ

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರದ ವೇಳೆ ನಡೆದ ಕೊಲೆ, ಮಹಿಳೆಯರ ವಿರುದ್ಧದ ಅಪರಾಧದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಬೇಕೆಂದು ಹೈಕೋರ್ಟ್ ಆಗಸ್ಟ್ 19 ರಂದು ನಿರ್ದೇಶಿಸಿತ್ತು. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಉಳಿದ ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡಲಿದ್ದು ಎರಡೂ ತನಿಖೆಗಳನ್ನು ತಾನು ಮೇಲ್ವಿಚಾರಣೆ ಮಾಡುವುದಾಗಿ ಹೈಕೋರ್ಟ್ ಹೇಳಿತ್ತು.

“ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸಮಿತಿ ವರದಿ ಪ್ರಕಾರ ಕೊಲೆ, ಮಹಿಳೆಯರ ಅತ್ಯಾಚಾರ, ಅತ್ಯಾಚಾರ ಯತ್ನ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು” ಎಂದು ನ್ಯಾಯಾಲಯ ಆದೇಶಿಸಿತ್ತು. ಚುನಾವಣೋತ್ತರ ಹಿಂಸಾಚಾರದ ದೂರುಗಳನ್ನು ತನಿಖೆ ಮಾಡಲು ರಚಿಸಲಾಗಿದ್ದ ಎನ್‌ಎಚ್‌ಆರ್‌ಸಿಯ ಏಳು ಸದಸ್ಯರ ಸಮಿತಿಯ ವರದಿ ಪರಿಶೀಲಿಸಿದ ಬಳಿಕ ಹೈಕೋರ್ಟ್‌ ಈ ನಿರ್ಧಾರ ಕೈಗೊಂಡಿತ್ತು. ಆದರೆ, ಇದನ್ನು ರಾಜ್ಯ ಸರ್ಕಾರವು ವಿರೋಧಿಸಿತ್ತು. ಎನ್‌ಎಚ್‌ಆರ್‌ಸಿ ವರದಿಯು ಪಕ್ಷಪಾತದಿಂದ ಕೂಡಿದೆ ಎಂದಿತ್ತು. ಅಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು ಅದರಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ ಎಂದೂ ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ ಮುಂದೆ ವಾದ ಮಂಡಿಸಿತ್ತು.

Related Stories

No stories found.
Kannada Bar & Bench
kannada.barandbench.com