ತಾಯಿ ಎದೆಹಾಲು ಸಂಗ್ರಹಣೆ, ಮಾರಾಟ: ಕಾನೂನು ಚೌಕಟ್ಟಿನ ಮಾಹಿತಿ ಒದಗಿಸಲು ಹೈಕೋರ್ಟ್‌ ಸೂಚನೆ

ಖಾಸಗಿ ಸಂಸ್ಥೆಗಳು ತಾಯಿ ಎದೆಹಾಲು ವಾಣಿಜ್ಯೀಕರಣದಲ್ಲಿ ತೊಡಗಿರುವುದನ್ನು, ಎದೆಹಾಲು ಸಂಗ್ರಹಿಸುವ ಹಾಗೂ ಮಾರಾಟ ಮಾಡುವುದನ್ನು ಶೀಘ್ರ ಹಾಗೂ ಸಂಪೂರ್ಣವಾಗಿ ತಡೆಯಲು ಅಗತ್ಯ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Chief Justice N V Anjaria and Justice Krishna S. Dixit
Chief Justice N V Anjaria and Justice Krishna S. Dixit

ತಾಯಿ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟವನ್ನು ತಡೆಯಲು ಯಾವುದಾದರೂ ಕಾನೂನು ಜಾರಿಯಲ್ಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ತಾಯಿ ಎದೆಹಾಲನ್ನು ವಾಣಿಜ್ಯೀಕರಣ ಮಾಡುತ್ತಿರುವುದನ್ನು ನಿಲ್ಲಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಮರಳಕುಂಟೆ ನಿವಾಸಿ ಮುನೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರಿಗೆ ತಾಯಿ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟವನ್ನು ತಡೆಯಲು ಯಾವುದಾದರೂ ಕಾನೂನು ಜಾರಿಯಲ್ಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿತು.

ಅರ್ಜಿದಾರರ ಪರ ವಕೀಲ ಬಿ ವಿಶ್ವೇಶ್ವರಯ್ಯ ಅವರು ಕೆಲ ಬಹುರಾಷ್ಟ್ರೀಯ ಕಂಪೆನಿಗಳು ತಾಯಿ ಎದೆಹಾಲು ವಾಣಿಜ್ಯೀಕರಣ ಮಾಡುತ್ತಿವೆ. ಅನೈತಿಕವಾಗಿರುವ ಈ ವ್ಯಾಪಾರವನ್ನು ತಡೆಯಬೇಕು. ಆ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ತಾಯಿ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ವಿಶೇಷ ಹಾಗೂ ನಿರ್ದಿಷ್ಟ ಘಟನೆ ನಡೆದಿರುವುದು ಕಂಡುಬಂದಿದೆಯೇ? ಅದನ್ನು ತಡೆಯಲು ದೇಶ-ವಿದೇಶದಲ್ಲಿ ಯಾವುದಾದರೂ ಕಾನೂನುಗಳ ಇವೆಯೇ? ಎಂದು ಪ್ರಶ್ನಿಸಿತು.

ಅದಕ್ಕೆ ಉತ್ತರಿಸಿದ ವಕೀಲರು, ನಾನು ನಡೆಸಿದ ಅಧ್ಯಯನ ಪ್ರಕಾರ ಯಾವುದೇ ಕಾನೂನು ಇಲ್ಲವೆಂದು ಮಾಹಿತಿ ನೀಡಿದರು.

ಆಗ ಪೀಠವು ಯಾವುದೇ ಕಾನೂನುಗಳು ಇಲ್ಲದೇ ನಿಮ್ಮ ಮನವಿ ಪರಿಗಣಿಸಿ ಕ್ರಮ ಜರುಗಿಸುವಂತೆ ಪ್ರತಿವಾದಿಗಳಿಗೆ ಹೇಗೆ ನಿರ್ದೇಶಿಸಲು ಸಾಧ್ಯ? ಯಾವುದಾದರೂ ಕಾನೂನಿನ ಚೌಕಟ್ಟು ಇರಬೇಕಲ್ಲವೇ? ಇಲ್ಲವಾದರೆ ಕಾನೂನು ರೂಪಿಸುವಂತೆ ನಿರ್ದೇಶಿಸಲು ಪಿಐಎಲ್‌ ವ್ಯಾಪ್ತಿಯಲ್ಲಿ ನ್ಯಾಯಾಲಯಕ್ಕೆ ಹೇಗೆ ಸಾಧ್ಯ? ಎಂದು ಕೇಳಿತು.

ಅರ್ಜಿಯಲ್ಲಿ ಪ್ರಮುಖವಾದ ವಿಚಾರ ಎತ್ತಲಾಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ, ಪ್ರಕರಣ ಸಂಬಂಧ ಮತ್ತಷ್ಟು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿತು.

ಕಳೆದ ಹಲವು ವರ್ಷಗಳಿಂದ ತಾಯಿ ಎದೆಹಾಲು ವಾಣಿಜ್ಯೀಕರಣ ಅನೈತಿಕ ವ್ಯಾಪಾರ ನಡೆಯುತ್ತಿದೆ. ಕೆಲ ಖಾಸಗಿ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿ ತಾಯಿಗೆ ಹಣ ನೀಡಿ ಎದೆಹಾಲು ಸಂಗ್ರಹಿಸಿ, ನಂತರ ಅದನ್ನು ಪೌಡರ್‌ ರೂಪದಲ್ಲಿ ದೇಶದಾದ್ಯಂತ ಮಾಟಾಟ ಮಾಡುತ್ತಿವೆ. ತಾಯಿ ಎದೆ ಹಾಲನ್ನು ನವಜಾತ ಶಿಶುಗಳಿಗೆ ಉಣಿಸಲು ಮಾತ್ರ ಬಳಸಬಹುದು. ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು 2017ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ತಾಯಿ ಎದೆಹಾಲನ್ನು ಮಾರಾಟ ಮಾಡಿದರೆ, ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಖಾಸಗಿ ಸಂಸ್ಥೆಗಳು ತಾಯಿ ಎದೆಹಾಲು ವಾಣಿಜ್ಯೀಕರಣದಲ್ಲಿ ತೊಡಗಿರುವುದನ್ನು, ಎದೆಹಾಲು ಸಂಗ್ರಹಿಸುವ ಹಾಗೂ ಮಾರಾಟ ಮಾಡುವುದನ್ನು ಶೀಘ್ರ ಹಾಗೂ ಸಂಪೂರ್ಣವಾಗಿ ತಡೆಯಲು ಅಗತ್ಯ ಆದೇಶ ಹೊರಡಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಎದೆಹಾಲು ಸಂಗ್ರಹಣೆ ಹಾಗೂ ಮಾರಾಟದಿಂದ ಖಾಸಗಿ ಕಂಪೆನಿಗಳು ಗಳಿಸಿರುವ ಲಾಭವನ್ನು ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆಯುಷ್‌, ಕಾನೂನು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಪ್ರತಿವಾದಿ ಮಾಡಲಾಗಿದೆ.

Kannada Bar & Bench
kannada.barandbench.com