ಮಗುವಿಗೆ ಸ್ತನ್ಯಪಾನ ಮಾಡಿಸುವುದು ತಾಯಿಯಿಂದ ಬೇರ್ಪಡಿಸಲಾಗದ ಮೂಲಭೂತ ಹಕ್ಕಾಗಿದ್ದು ಇದು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಜೀವಿಸುವ ಹಕ್ಕಿನ ಮತ್ತೊಂದು ಭಾಗ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.
ಹೆತ್ತ ತಾಯಿ ಹಾಗೂ ಸಾಕು ತಾಯಿಯ ನಡುವೆ ಮಗುವಿನ ವಶಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ್ದ ವ್ಯಾಜ್ಯದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ತಾಯಿಗೆ ಎದೆ ಹಾಲು ನೀಡುವ ಹಕ್ಕಿರುವಂತೆಯೇ ಸ್ತನ್ಯಪಾನ ಮಾಡುವ ಹಕ್ಕು ಸ್ತನ್ಯಪಾನ ಮಾಡುವ ಶಿಶುವಿಗೂ ಇರುತ್ತದೆ. ಇದು ಸ್ತನ್ಯಪಾನ ನೀಡುವ ತಾಯಿಯ ಹಕ್ಕಿಗೆ ಸಹವರ್ತಿಯಾಗಿರುತ್ತದೆ ಎಂದು ಹೇಳಿದೆ.
“ಕೌಟುಂಬಿಕ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಕುರಿತು ಚರ್ಚಿಸಿರುವ ಹಿನ್ನೆಲೆಯಲ್ಲಿ ಸ್ತನ್ಯಪಾನ ನೀಡುವುದು ತಾಯಿಯ ಒಂದು ಬೇರ್ಪಡಿಸಲಾಗದ ಹಕ್ಕು ಎಂದು ಪರಿಗಣಿಸಬೇಕಿದೆ. ಅಂತೆಯೇ, ಸ್ತನ್ಯಪಾನ ಮಾಡುವ ಶಿಶುವಿನ ಸ್ತನ್ಯಪಾನದ ಹಕ್ಕನ್ನೂ ಸಹ ಪರಿಗಣಿಸಬೇಕು. ಇದನ್ನು ತಾಯಿಯ ಹಕ್ಕಿನೊಂದಿಗೆ ಸಮೀಕರಿಸಬೇಕು. ಇದು ಸಹವರ್ತಿ ಹಕ್ಕಿನ ಪ್ರಕರಣವಾಗಿದೆ; ತಾಯ್ತನದ ಈ ಪ್ರಮುಖ ಗುಣಲಕ್ಷಣವು ಭಾರತದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ; ದುರದೃಷ್ಟಕರವೆಂದರೆ ತನ್ನದಲ್ಲದ ತಪ್ಪಿಗೆ ಇದುವರೆಗೆ ಈ ಸುಂದರ ಮಗುವು ಎದೆ ಹಾಲು ಕುಡಿದಿಲ್ಲ. ಎದೆ ಹಾಲು ಕುಡಿಸಲು ತಾಯಿಗೆ ಅವಕಾಶ ದೊರೆತಿಲ್ಲ; ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳು ನಡೆಯಬಾರದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಸಾಕು ತಾಯಿಯನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಸುಬ್ರಹ್ಮಣ್ಯ ಅವರು “ಅತ್ಯಂತ ಪ್ರೀತಿ, ಅಭಿಮಾನ ಮತ್ತು ವಾತ್ಸಲ್ಯದಿಂದ ಮಗುವನ್ನು ಹಲವು ತಿಂಗಳಿಂದ ಸಾಕು ತಾಯಿ ನೋಡಿಕೊಂಡಿದ್ದಾರೆ. ಹೀಗಾಗಿ, ಮಗು ಅವರಿಗೆ ದಕ್ಕಬೇಕು. ಆನುವಂಶಿಕ ತಾಯಿಗೆ ಎರಡು ಮಕ್ಕಳಿವೆ. ಆದರೆ, ಸಾಕು ತಾಯಿಗೆ ಯಾವುದೇ ಮಕ್ಕಳಿಲ್ಲ” ಎಂದರು.
ಮಗುವಿನ ಹೆತ್ತ ತಾಯಿಯನ್ನು ಪ್ರತಿನಿಧಿಸಿದ್ದ ವಕೀಲ ಸಿರಾಜುದ್ದೀನ್ ಅಹ್ಮದ್ ಅವರು “ಮಗುವಿನ ಕಸ್ಟಡಿಗೆ ಸಂಬಂಧಿಸಿದಂತೆ ಪೋಷಕರ ನಡುವಿನ ವಿಚಾರ ಇದಾಗಿದ್ದರೆ ಸಾಕು ತಾಯಿಯ ವಾದ ಸತ್ಯವಾಗಬಹುದು. ಆದರೆ ಇದು ಹೆತ್ತ ತಾಯಿ ಮತ್ತು ಸಾಕು ತಾಯಿ ನಡುವಿನ ಪ್ರಕರಣವಾಗಿದ್ದು ಹೆತ್ತ ತಾಯಿಗೆ ಸಾಕು ತಾಯಿ ತಲೆಬಾಗಬೇಕಾಗುತ್ತದೆ” ಎಂದರು.
ತಾಯಿ ತನ್ನ ಮಗುವಿಗೆ ಹಾಲುಣಿಸುವುದು ಮತ್ತು ತಾಯಿಯ ಎದೆ ಹಾಲು ಕುಡಿಯುವ ಮಗುವಿನ ಹಕ್ಕನ್ನು ಸಂವಿಧಾನದ 21ನೇ ವಿಧಿಯಡಿ ರಕ್ಷಿಸಲಾಗಿದೆ. “ಹಾಲಿ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಮುಗ್ಧ ಮಗು ಎದೆ ಹಾಲು ಕುಡಿದಿಲ್ಲ. ಹೆತ್ತ ತಾಯಿಗೆ ಮಗುವಿಗೆ ಹಾಲುಣಿಸುವ ಅವಕಾಶ ದೊರೆತಿಲ್ಲ; ನಾಗರಿಕ ಸಮಾಜದಲ್ಲಿ ಇಂಥ ಪ್ರಕರಣಗಳು ಘಟಿಸಬಾರದು” ಎಂದರು.
ತನಗೆ ಮಗುವಿಲ್ಲ ಎಂಬ ಕಾರಣಕ್ಕೆ ಹಸುಗೂಸನ್ನು ತಾನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬ ಸಾಕು ತಾಯಿಯ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. “ಸಂಖ್ಯಾತ್ಮಕ ಸಮೃದ್ಧಿಯ ಆಧಾರದಲ್ಲಿ ಹೆತ್ತ ತಾಯಿ ಮತ್ತು ಅಪರಿಚಿತರ ನಡುವೆ ಹಂಚಿಕೊಳ್ಳಲು ಮಕ್ಕಳು ಚರಾಸ್ತಿಯಲ್ಲ” ಎಂದು ನ್ಯಾಯಾಲಯ ಹೇಳಿತು. ಅಲ್ಲದೆ, ಮಗುವಿನ ಮೇಲೆ ಅಪರಿಚತರ ಹಕ್ಕು ಸಾಧನೆಯು ಜೈವಿಕ ತಂದೆತಾಯಂದರಿ ಹಕ್ಕು ಸಾಧನೆಯ ಎದುರಿನಲ್ಲಿ ಕಡಿಮೆ ತೂಗುತ್ತದೆ ಎಂದೂ ಸಹ ನ್ಯಾಯಾಲಯ ತಿಳಿಸಿತು.
ಇದೇ ವೇಳೆ ಹೆತ್ತ ತಾಯಿಗೆ ಮಗುವನ್ನು ಸಾಕು ತಾಯಿ ಹಸ್ತಾಂತರಿಸಿದ್ದಾರೆ. ಮಗುವನ್ನು ನೋಡಬೇಕೆಂದಾಗ ಅವರು ಬಂದು ಮಗುವನ್ನು ನೋಡಬಹುದು ಎಂದು ಹೆತ್ತ ತಾಯಿ ಹೇಳಿದ್ದಾರೆ ಎಂದು ಪೀಠಕ್ಕೆ ಮಾಹಿತಿ ನೀಡಲಾಯಿತು. ಇದಕ್ಕೆ ಪೀಠವು “ಇತ್ತೀಚಿನ ದಿನಗಳಲ್ಲಿ ಎರಡು ವಿಭಿನ್ನ ಧಾರ್ಮಿಕ ಹಿನ್ನೆಲೆಯಿಂದ ಬಂದ ಇಬ್ಬರು ಮಹಿಳೆಯರಿಂದ ಬರುವ ಇಂತಹ ಉದಾರ ವರ್ತನೆಗಳು ಅಪರೂಪ. ಹೀಗಾಗಿ, ಮುಗ್ಧ ಮಗುವಿನ ಕಸ್ಟಡಿಗೆ ಸಂಬಂಧಿಸಿದ ಕಾನೂನು ಹೋರಾಟವು ಅಂತಿಮವಾಗಿ ಸುಖಾಂತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿತು.
ಪ್ರಕರಣದಲ್ಲಿ ಸಂಶೋಧನಾ ಸಹಾಯಕ ಹಾಗೂ ಕಾನೂನು ಗುಮಾಸ್ತ ಫೈಜ್ ಅಫ್ಸರ್ ಸೇಠ್ ಮತ್ತು ಲಾ ಇಂಟರ್ನ್ ಋತ್ವಿಕ್ ಮಾಥೂರ್ ಅವರ ಪ್ರಯತ್ನವನ್ನು ಶ್ಲಾಘಿಸಿರುವ ನ್ಯಾಯಾಲಯವು ಮನವಿಯನ್ನು ವಿಲೇವಾರಿ ಮಾಡಿತು.