

ಶಾಲಾ ವಿದ್ಯಾರ್ಥಿಗೆ (ಅಪ್ರಾಪ್ತನಿಗೆ) ಮದ್ಯಪಾನ-ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಲೆಗಸಿ ಬ್ರೀವಿಂಗ್ ಕಂಪನಿ ಪಾಲುದಾರ ವಿ ಚಿಟ್ಟಿಬಾಬು ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಬುಧವಾರ ನಿರಾಕರಿಸಿರುವ ಕರ್ನಾಟಕ ಹೈಕೊರ್ಟ್, ಬ್ರೀವರಿಸ್ ಮತ್ತು ಅಂತಹುದೇ ಮದ್ಯ ಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವವರ ವಯಸ್ಸು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಮಹತ್ವದ ಆದೇಶ ನೀಡಿದೆ.
ಕಳೆದ ಜನವರಿ 31ರಂದು 15 ವರ್ಷದ ಶಾಲಾ ವಿದ್ಯಾರ್ಥಿ ರೆಯಾನ್ ಜೇಕಬ್ ಲೆಗಸಿ ಬ್ರೀವಿಂಗ್ ಕಂಪನಿಯಲ್ಲಿ ಮದ್ಯ ಸೇವಿಸಿದ ನಂತರ ತನ್ನ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಅಪ್ತಾಪ ಬಾಲಕನಿಗೆ ಮದ್ಯಪಾನ ಮಾಡಲು ಅವಕಾಶ ಕೊಟ್ಟ ಆರೋಪದ ಮೇಲೆ ತಮ್ಮ ವಿರುದ್ಧ ರಾಜರಾಜೇಶ್ವರಿ ನಗರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಚಿಟ್ಟಿಬಾಬು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.
ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿರುವ ಬ್ರೀವರೀಸ್ ಮತ್ತು ಅಂತಹುದೇ ಸಂಸ್ಥೆಗಳು, ಪ್ರವೇಶದ ನಿರ್ಬಂಧದಲ್ಲಿ ಆಧಾರ್ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಕಠಿಣವಾಗಿ ವಯಸ್ಸು ಪರಿಶೀಲನಾ ಪ್ರೋಟೋಕಾಲ್ ಆರಂಭಿಸಬೇಕು. ಯುವಕರು ಅಥವಾ ಅಪ್ರಾಪ್ತ ವಯಸ್ಕರು ಮದ್ಯ ನೀಡಲು ಕೋರಿದಾಗ ಅವರ ವಯಸ್ಸಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು. ಬ್ರೀವರೀಸ್ ಅಥವಾ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳಲ್ಲಿ ವಯಸ್ಸಿನ ಪರಿಶೀಲನೆಯನ್ನು ಕಾಟಾಚಾರ ಅಥವಾ ಉದಾಸೀನತೆಯಿಂದ ಮಾಡಬಾರದು. ಅಪ್ರಾಪ್ತರು ಮದ್ಯಪಾನ ಮಾಡಬಾರದು. ಅಪ್ತಾಪ್ತರಿಗೆ ಮದ್ಯ ಸರಬರಾಜು ಮಾಡುವುದಿಲ್ಲ ಎಂಬ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಕಠಿಣ ಆದೇಶ ಹೊರಡಿಸಿದೆ.
ಅಲ್ಲದೇ, ಅಪ್ರಾಪ್ತ ವಯಸ್ಕರು ಪ್ರವೇಶ ಪಡೆದು, ಮದ್ಯ/ಮಾದಕ ವಸ್ತುಗಳ ನೀಡಲು ಕೋರಿದಾಗ, ಬಹಿರಂಗವಾಗಿ ಅಥವಾ ರಹಸ್ಯವಾಗಿ ಸೇವನೆ ಮಾಡಿದಾಗ ಬ್ರೀವರೀಸ್ ಸಂಸ್ಥೆಗಳ ಆಡಳಿತ ಮಂಡಳಿಯವರು ಉದಾಸೀನತೆ ತೋರಬಾರದು. ಯುವಕರ ರಕ್ಷಣೆ ಕೇವಲ ಶಾಸನಬದ್ಧ ಕರ್ತವ್ಯವಲ್ಲ. ಅದು ನೈತಿಕವಾಗಿ ಕಡ್ಡಾಯವಾಗಿದೆ. ಈ ವಿಚಾರದಲ್ಲಿ ಯಾವುದೇ ತಪ್ಪು ಮಾಡಿದರೂ ಅಂತಹ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.
ಇನ್ನೂ 15 ವರ್ಷದ ಬಾಲಕ ತಮ್ಮ ಸ್ನೇಹಿತರೊಂದಿಗೆ ಬಂದು ಮದ್ಯ ಖರೀದಿಸಿ ತನ್ನ ಬ್ಯಾಗಿನಲ್ಲಿಟ್ಟುಕೊಂಡು ತೆರಳಿದ್ದ. ಖಾಲಿಯಿದ್ದ ಮೇಜಿನ ಕೆಳಗೆ ಕೂತು ಮದ್ಯ ಸೇವಿಸಿ ಲೆಗಸಿ ಬ್ರೀವಿಂಗ್ ಕಂಪನಿ ಆವರಣದಿಂದ ಹೊರ ನಡೆದಿದ್ದಾನೆ. ಇದರಿಂದ ಬಾಲಕ ಏನು ಸೇವಿಸಿದ ಎಂಬುದು ಅರ್ಜಿದಾರ ಅಥವಾ ಕಂಪನಿಯ ಸಿಬ್ಬಂದಿಗೆ ತಿಳಿದಿಲ್ಲ. 18ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕಂಪನಿ ಮದ್ಯ ಸರಬರಾಜು ಮಾಡುವುದಿಲ್ಲ. ಅಬಕಾರಿ ಕಾಯಿದೆಯು ಮದ್ಯ ಸರಬರಾಜಿಗೆ ಶಿಕ್ಷಿಸುತ್ತದೆ ಹೊರತು ಸೇವನೆಗೆ ಅಲ್ಲ. ಆದ್ದರಿಂದ, ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು ಎಂಬ ಅರ್ಜಿದಾರರ ವಾದವನ್ನು ಪೀಠ ತಳ್ಳಿಹಾಕಿದೆ.
ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಮದ್ಯ ಮಾರಾಟ ಪರವಾನಗಿ ಪಡೆದವರ ಮೇಲೆ ಅಪ್ರಾಪ್ತ ವಯಸ್ಕರಿಗೆ ಸರಬರಾಜು ತಡೆಯುವ ಬಾಧ್ಯತೆಯಲ್ಲದೆ, ಬದಲಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವ ಅಥವಾ ತಯಾರಿಸುವ ಆವರಣದಲ್ಲಿ ಅಪ್ರಾಪ್ತ ವಯಸ್ಕರು ಉಳಿಯದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ಕಾನೂನು ಹೇರುತ್ತದೆ. ಬ್ರೀವರಿ ಮಾರಾಟ ಮತ್ತು ತಯಾರಿಕೆಗೆ ಆವರಣಕ್ಕೆ ಅಪ್ರಾಪ್ತ ವಯಸ್ಸಿನ ಹುಡುಗರಿಗೆ ಪ್ರವೇಶವನ್ನು ಅನುಮತಿಸಿರುವುದು ಕಳವಳ ಉಂಟು ಮಾಡುವಂತಾಗಿದೆ ಎಂದು ಅಭಿಪ್ರಾಯಪಟ್ಟಿತು.
ಈ ಪ್ರಕರಣದಲ್ಲಿ ಮದ್ಯ ಸೇವೆನೆಯಿಂದ ದುರದುಷ್ಟವಶಾತ್ ಬಾಲಕನ ಸಾವು ಸಂಭವಿಸಿದೆ. ಮೃತದೇಹದಲ್ಲಿ ಮದ್ಯ ಮತ್ತೆಯಾಗಿರುವುದನ್ನು ತಳ್ಳಿಹಾಕಲಾಗದು. ಅರ್ಜಿದಾರರ ಸಂಸ್ಥೆಯ ಸಿಬ್ಬಂದಿ ಅಥವಾ ಆಡಳಿತ ಮಂಡಳಿಯ ಅರಿವಿಲ್ಲದೆ ಮೃತ ಬಾಲಕ ಮದ್ಯ ಸೇವಿಸಿದ್ದಾನೆ ಎಂಬ ವಾದವೇ ವಿಚಾರಣೆಗೆ ಒಳಪಡುವಂತಹದ್ದು. ಹಾಗಾಗಿ, ಪ್ರಕರಣದ ತನಿಖೆ ನಡೆಯುವುದು ಅಗತ್ಯವಿದೆ. ಜೊತೆಗೆ, ವಯಸ್ಸಿನ ಪರಿಶೀಲನೆ ಇಲ್ಲದೆ ಅಪ್ರಾಪ್ತ ವಯಸ್ಕರು ಹೇಗೆ ಲೆಗಸಿ ಬ್ರೀವರಿ ಲಿಮಿಟೆಡ್‌ನ ಪ್ರವೇಶ ಪಡೆದರು? ದಾಖಲೆಗಳ ಗುರುತನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನ ಅಸ್ತಿತ್ವದಲ್ಲಿದೆಯೇ? ಈ ವಿಚಾರದಲ್ಲಿ ಮೇಲ್ವಿಚಾರಣಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆಯೇ? ಮತ್ತು ಮದ್ಯ ಪರವಾನಗಿದಾರರು ತಮ್ಮ ಮೇಲೆ ವಿಧಿಸಲಾಗಿರುವ ಶಾಸನಬದ್ಧ ಹೊಣೆಗಾರಿಕೆಗಳನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಸುವುದು ಅಗತ್ಯ ತಿಳಿಸಿದ ಪೀಠವು ಅರ್ಜಿ ವಜಾಗೊಳಿಸಿದೆ.