ಲಂಚ ಪ್ರಕರಣ: ಪ್ರಶಾಂತ್ ಮಾಡಾಳ್‌ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ದೂರುದಾರ ಶ್ರೇಯಸ್ ಕಶ್ಯಪ್ ನಿರ್ದೇಶಕರಾಗಿರುವ ಡಿಲಿಸಿಯಾ ಕೆಮಿಕಲ್ಸ್ ಕಂಪೆನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಕುರಿತ ಕೆಎಸ್‌ಡಿಎಲ್ ಟೆಂಡರ್ ಕಾರ್ಯಾದೇಶ ನೀಡಲು ಪ್ರತಿಯಾಗಿ ₹40 ಲಕ್ಷ ಲಂಚ ಪಡೆದಿದ್ದಾರೆ ಎಂಬುದು ಪ್ರಶಾಂತ್ ವಿರುದ್ಧದ ಆರೋಪ.
K Madalu Virupakshappa and Prashant Madal
K Madalu Virupakshappa and Prashant Madal
Published on

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಟೆಂಡರ್ ಕಾರ್ಯಾದೇಶ ನೀಡಲು ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಎಂ ವಿ ಪ್ರಶಾಂತ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿಯೂ ಆದ ಪ್ರಶಾಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅರ್ಜಿದಾರರು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಇದೇ ಮಾದರಿ ಪ್ರಕರಣದಲ್ಲಿ ಮತ್ತೆ ಭಾಗಿಯಾಗಬಾರದು. ಪ್ರಕರಣದ ಸಾಕ್ಷ್ಯಾಧಾರ ನಾಶಪಡಿಸಲು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು. ಪೂರ್ವಾನಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಬಿಟ್ಟು ತೆರಳಬಾರದು. ಪಾರ್ಸ್‌ಪೋರ್ಟ್ ಅನ್ನು ತನಿಖಾಧಿಕಾರಿಯ ಸುಪರ್ದಿಗೆ ನೀಡಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಇದಕ್ಕೂ ಮುನ್ನ, ಪ್ರಶಾಂತ್ ಪರ ವಕೀಲ ಶಂಕರ್ ಹೆಗಡೆ ವಾದ ಮಂಡಿಸಿ, ಕೆಎಎಸ್‌ಡಿಎಲ್ ಗುತ್ತಿಗೆಗಳು ಇ-ಟೆಂಡರ್ ಪ್ರಕ್ರಿಯೆ ಮೂಲಕ ನಡೆಸಲಾಗುತ್ತದೆ. ಟೆಂಡರ್ ಕುರಿತು ಸಮಿತಿಯೇ ನಿರ್ಧಾರ ತೆಗೆದುಕೊಳ್ಳುತ್ತದೆ. ಆದ್ದರಿಂದ, ಪ್ರಕರಣದಲ್ಲಿ ಅರ್ಜಿದಾರ ಅಥವಾ ಅವರ ತಂದೆಯ ಯಾವುದೇ ಪಾತ್ರವಿಲ್ಲ. ಮೇಲಾಗಿ ದೂರು ನೀಡಿರುವವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇದೇ ದ್ವೇಷದಿಂದ ಅವರು ಸುಳ್ಳು ದೂರು ನೀಡಿದ್ದಾರೆ. ಪ್ರಕರಣದ ತನಿಖೆಗೆ ಅರ್ಜಿದಾರರು ಎಲ್ಲ ರೀತಿಯ ಸಹಕಾರ ನೀಡಲಿದ್ದು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರಿದರು.

ಪ್ರಕರಣದಲ್ಲಿ ದೂರುದಾರ ಶ್ರೇಯಸ್ ಕಶ್ಯಪ್ ನಿರ್ದೇಶಕರಾಗಿರುವ ಮೆರ್ಸೆಸ್ ಡಿಲಿಸಿಯಾ ಕೆಮಿಕಲ್ಸ್ ಕಂಪೆನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಕುರಿತ ಕೆಎಸ್‌ಡಿಎಲ್ ಟೆಂಡರ್ ಕಾರ್ಯಾದೇಶ ನೀಡಲು ಪ್ರತಿಯಾಗಿ 40 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂಬುದು ಪ್ರಶಾಂತ್ ವಿರುದ್ಧದ ಆರೋಪವಾಗಿದೆ. ಇದೇ ಆರೋಪ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯಿದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾರ್ಚ್‌ 2ರಂದು ಎಫ್ಐಆರ್ ದಾಖಲಿಸಿದ್ದರು. ಲಂಚದ ಹಣ ಸ್ವೀಕರಿಸುವಾಗಲೇ ಪ್ರಶಾಂತ್ ಅವರನ್ನು ವಶಕ್ಕೆ ಪಡೆದಿದ್ದರು.

Also Read
ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಲಂಚ ಸ್ವೀಕಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದರೆ, ಅವರ ಪುತ್ರ ಪ್ರಶಾಂತ್ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಜಾಮೀನು ಕೋರಿ ಪ್ರಶಾಂತ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಏಪ್ರಿಲ್‌10ರಂದು ವಜಾಗೊಳಿಸಿತ್ತು. ಇದರಿಂದ, ಪ್ರಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣದಲ್ಲಿ ಮಾರ್ಚ್‌ 27ರಂದು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಏ.15ರಂದು ಜಾಮೀನು ಮಂಜೂರು ಮಾಡಿತ್ತು.

Kannada Bar & Bench
kannada.barandbench.com