ಬೆಂಗಳೂರು ಡಿ ಸಿ ಕಚೇರಿ ಲಂಚ ಪ್ರಕರಣ: ಆರೋಪಿ ಉಪ ತಹಶೀಲ್ದಾರ್‌ ಜಾಮೀನು ಮನವಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

“ವಿಶೇಷ ಮನವಿ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತುತ ಜಾಮೀನು ಮನವಿಯ ವಿಚಾರಣೆಯನ್ನು ಮೂರು ದಿನ ಮೂಂದೂಡುವಂತೆ ಸುಪ್ರೀಂ ಕೋರ್ಟ್‌ ಕೋರಿದೆ. ಹೀಗಾಗಿ, ವಿಚಾರಣೆಯನ್ನು ಸೋಮವಾರಕ್ಕೆ (ಜುಲೈ18) ಮುಂದೂಡಲಾಗಿದೆ” ಎಂದು ಆದೇಶಿಸಿದ ನ್ಯಾ. ಸಂದೇಶ್‌.
Karnataka HC, Anti Corruption Bureau and Justice H P Sandesh
Karnataka HC, Anti Corruption Bureau and Justice H P Sandesh
Published on

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿರುವ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೋರಿಕೆ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಸೋಮವಾರಕ್ಕೆ (ಜುಲೈ18) ಮುಂದೂಡಿತು.

ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ಪ್ರಕರಣದ ವಿಚಾರಣೆಯನ್ನು ಕೈಗೊಳ್ಳುತ್ತಿದ್ದಂತೆ ಹೈಕೋರ್ಟ್‌ ನ್ಯಾಯಿಕ ರಿಜಿಸ್ಟ್ರಾರ್‌ ಅವರು ಸುಪ್ರೀಂ ಕೋರ್ಟ್‌ ಸೀಮಂತ್‌ ಕುಮಾರ್‌ ಅವರು ಸಲ್ಲಿಸಿರುವ ವಿಶೇಷ ಮನವಿಗೆ ಸಂಬಂಧಿಸಿದಂತೆ ಮಂಗಳವಾರ ಮಾಡಿರುವ ಆದೇಶವನ್ನು ಪೀಠಕ್ಕೆ ಸಲ್ಲಿಸಿದರು.

ಇದನ್ನು ಸ್ವೀಕರಿಸಿದ ನ್ಯಾಯಾಲಯವು “ವಿಶೇಷ ಮನವಿ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತುತ ಜಾಮೀನು ಮನವಿಯ ವಿಚಾರಣೆಯನ್ನು ಮೂರು ದಿನ ಮೂಂದೂಡುವಂತೆ ಸುಪ್ರೀಂ ಕೋರ್ಟ್‌ ಕೋರಿದೆ. ಹೀಗಾಗಿ, ವಿಚಾರಣೆಯನ್ನು ಸೋಮವಾರಕ್ಕೆ (ಜುಲೈ18) ಮುಂದೂಡಲಾಗಿದೆ” ಎಂದು ಆದೇಶಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿರುವ ಉಪ ತಹಶೀಲ್ದಾರ್‌ ಮಹೇಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪ್ರತಿವಾದಿಯಾಗಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯನಿರ್ವಹಣೆಯ ಬಗ್ಗೆ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಲಂಚ ಪ್ರಕರಣದಲ್ಲಿ ಬೆಂಗಳೂರು ನಗರದ ಅಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರ ಪಾತ್ರವಿದ್ದರೂ ಆರೋಪಿಯನ್ನಾಗಿ ಮಾಡದಿರುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ಮಹೇಶ್‌ ಮತ್ತು ಆರೋಪಿತ ಮತ್ತೊಬ್ಬ ಸಿಬ್ಬಂದಿಯ ವ್ಯತಿರಿಕ್ತ ಹೇಳಿಕೆ, ಎಸಿಬಿ ಹಾಗೂ ರಾಜ್ಯ ಸರ್ಕಾರದ ನಿಲುವಿನಲ್ಲಿ ವ್ಯತ್ಯಾಸಗಳನ್ನು ಗುರುತಿಸಿದ್ದ ನ್ಯಾ. ಸಂದೇಶ್‌ ಅವರು ಇದುವರೆಗೆ ಎಸಿಬಿ ಸಲ್ಲಿಸಿರುವ ʼಬಿʼ ರಿಪೋರ್ಟ್‌ಗಳ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಇದನ್ನು ಪಾಲಿಸಿದ ಎಸಿಬಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಅಲ್ಲದೇ, ಎಸಿಬಿ ಎಡಿಜಿಪಿ ಅವರ ಸೇವಾ ದಾಖಲೆ ಸಲ್ಲಿಸುವಂತೆ ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿತ್ತು.

ಈ ಮಧ್ಯೆ, ನ್ಯಾ. ಸಂದೇಶ್‌ ಅವರ ಕುರಿತು ದೆಹಲಿಯ ವ್ಯಕ್ತಿಯೊಬ್ಬರು ಹಾಲಿ ಹೈಕೋರ್ಟ್‌ ನ್ಯಾಯಮೂರ್ತಿ ಅವರಿಂದ ಮಾಹಿತಿ ಸಂಗ್ರಹಿಸಿದ್ದು, ಎಸಿಬಿ ಎಡಿಜಿಪಿ ಪ್ರಭಾವಶಾಲಿಯಾಗಿದ್ದಾರೆ ಎಂದು ನ್ಯಾಯಮೂರ್ತಿ ಅವರು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿ ನ್ಯಾ. ಸಂದೇಶ್‌ ಅವರು ಎಸಿಬಿ ಎಡಿಜಿಪಿ ಅವರ ನಡತೆ, ಕಾರ್ಯವೈಖರಿ ಮತ್ತು ಇಡೀ ಪ್ರಕರಣದ ಕುರಿತು ವಿಸ್ತೃತ ಆದೇಶವನ್ನು ಜುಲೈ 7ರ ಆದೇಶದಲ್ಲಿ ದಾಖಲಿಸಿದ್ದರು.

Also Read
ಸಹೋದ್ಯೋಗಿ ನ್ಯಾಯಮೂರ್ತಿ ಬಳಿ ದೆಹಲಿ ವ್ಯಕ್ತಿಯಿಂದ ನನ್ನ ಮಾಹಿತಿ ಸಂಗ್ರಹ: ಆದೇಶದಲ್ಲಿ ದಾಖಲಿಸಿದ ನ್ಯಾ. ಸಂದೇಶ್‌

ಈ ಆದೇಶವನ್ನು ಪ್ರಶ್ನಿಸಿ ಮೊದಲಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಸೀಮಂತ್‌ ಕುಮಾರ್‌ ಅವರು ಆನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠವು “ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಜು.12ಕ್ಕೆ ಪಟ್ಟಿ ಮಾಡಿದ್ದರೂ ಕೂಡ ನ್ಯಾಯಮೂರ್ತಿಗಳು (ನ್ಯಾ. ಸಂದೇಶ್‌) ಜುಲೈ 13ಕ್ಕೆ ವಿಚಾರಣೆಗೆ ನಿರ್ದೇಶಿಸಿದ್ದು, ಕೆಲವು ಮೌಖಿಕ ಆದೇಶಗಳನ್ನು ನೀಡಿದ್ದಾರೆ. ಇದನ್ನು ಪರಿಗಣಿಸಿ ಮೂರು ದಿನಗಳ ಕಾಲ ವಿಚಾರಣೆಯನ್ನು ಮುಂದೂಡುವಂತೆ ಕೋರುವುದು ಸೂಕ್ತ ಎಂದು ನಾವು ಭಾವಿಸುತ್ತೇವೆ” ಎಂದಿತ್ತು. ಅಲ್ಲದೇ, ಪ್ರಕರಣವನ್ನು ಜುಲೈ 14ಕ್ಕೆ ಮುಂದೂಡಿತ್ತು.

Kannada Bar & Bench
kannada.barandbench.com