ಲಂಚ ಪ್ರಕರಣ: ನಿವೃತ್ತ ನ್ಯಾ. ಇಂದ್ರಕಲಾ ವಿರುದ್ಧದ ತನಿಖೆಗೆ ಮನವಿ - ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಕೇಂದ್ರ ಸರ್ಕಾರದಲ್ಲಿ ಮಹತ್ವದ ಹುದ್ದೆ ಪಡೆಯುವ ಉದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಕ್ರಮವಾಗಿ ₹3.7 ಕೋಟಿ ಮತ್ತು ₹4.5 ಕೋಟಿ ಪಾವತಿಸಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.
BS Indrakala, Karnataka High Court
BS Indrakala, Karnataka High Court
Published on

ರಾಜ್ಯಪಾಲರ ಹುದ್ದೆ ಪಡೆಯಲು ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಇಂದ್ರಕಲಾ ಲಂಚ ಪಾವತಿ ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿ ಕುರಿತು ಕರ್ನಾಟಕ ಹೈಕೋರ್ಟ್‌ ಈಚೆಗೆ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

“ಕಚೇರಿ ಆಕ್ಷೇಪಣೆಗಳನ್ನು ಬದಿಗೆ ಸರಿಸಲಾಗಿದೆ. ಹೆಚ್ಚುವರಿ ಸರ್ಕಾರಿ ವಕೀಲರಿಗೆ ಪ್ರತಿವಾದಿ 1, 2 & 3 (ಪೊಲೀಸ್‌) ಪರವಾಗಿ ನೋಟಿಸ್‌ ಪಡೆಯಲು ಆದೇಶಿಸಲಾಗಿದೆ. ನಾಲ್ಕನೇ ಪ್ರತಿವಾದಿಯಾದ ನಿವೃತ್ತ ನ್ಯಾ. ಇಂದ್ರಕಲಾ ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾ. ಕೃಷ್ಣ ದೀಕ್ಷಿತ್‌ ನೇತೃತ್ವದ ಏಕ ಸದಸ್ಯ ಪೀಠ ಆದೇಶ ಮಾಡಿದೆ.

ನಿವೃತ್ತ ನ್ಯಾ. ಇಂದ್ರಕಲಾ ಅವರಿಂದ ಪಡೆದ ಲಿಖಿತ ಮಾಹಿತಿ ಆಧರಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 109 (ಕುಮ್ಮಕ್ಕು), 34 (ಸಾಮಾನ್ಯ ಉದ್ದೇಶ) ಮತ್ತು 420 (ವಂಚನೆ) ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ. ಇಲ್ಲಿ ಯುವರಾಜ್‌ ಮತ್ತು ಪಾಪಯ್ಯ ಅವರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ಆರೋಪಿಗಳನ್ನಾಗಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಡಿಸುವ ಭರವಸೆ ನೀಡಿದ್ದ ಯುವರಾಜ್‌ಗೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕ್ರಮವಾಗಿ ₹3.7 ಕೋಟಿ ಮತ್ತು ₹4.5 ಕೋಟಿ ಪಾವತಿಸಿದ್ದಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಆರೋಪಿಸಿದ್ದರು. ಭರವಸೆಯನ್ನು ಆಧರಿಸಿ ಹಣವನ್ನು ಯುವರಾಜ್‌ಗೆ ನೀಡಿದ್ದಾಗಿ ನ್ಯಾ. ಇಂದ್ರಕಲಾ ಹೇಳಿದ್ದು, ಇದಕ್ಕೆ ಪಾಪಯ್ಯ ಜವಾಬ್ದಾರನಾಗಿದ್ದ ಎಂದು ಹೇಳಿದ್ದರು. ಆದರೆ, ಭರವಸೆ ನೀಡಿದಂತೆ ಯುವರಾಜ್‌ ಹುದ್ದೆಯನ್ನು ಕೊಡಿಸಲಿಲ್ಲ. ಪಾವತಿಸಲಾದ ಮೊತ್ತವನ್ನು ಹಿಂದಿರುಗಿಸಿಲ್ಲ ಎಂದು ಹೇಳಿದ್ದರು.

ಕಳೆದ ವರ್ಷದ ಡಿಸೆಂಬರ್‌ 21ರಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದ ಅರ್ಜಿದಾರ ವಕೀಲ ಎನ್‌ ಪಿ ಅಮೃತೇಶ್‌ ಅವರು ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಪ್ರಕರಣದಲ್ಲಿ ಭಾಗಿಯಾಗಿರುವುದು ಮತ್ತು ಲಿಖಿತ ಮಾಹಿತಿಯಲ್ಲಿ ಅವರು ಆರೋಪಿಸಿರುವುದನ್ನು ಉಲ್ಲೇಖಿಸಿದ್ದರು. ಸಹಾಯಕ ಪೊಲೀಸ್‌ ಆಯುಕ್ತರಿಗೆ ತನಿಖೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಅವರಿಗೂ ಮನವಿ ನೀಡಲಾಗಿದೆ. ಆದರೆ, ಸಹಾಯಕ ಪೊಲೀಸ್‌ ಆಯುಕ್ತರು ಪ್ರಕರಣವನ್ನು ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ಅಮೃತೇಶ್‌ ಅವರಿಗೆ ತಿಳಿಸಿದ್ದರು.

ಈ ಮಧ್ಯೆ, ಯುವರಾಜ್‌ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು. “ರಾಜ್ಯಪಾಲರ ಹುದ್ದೆ ಪಡೆಯಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರು ಅರ್ಜಿದಾರರಿಗೆ ಲಂಚ ನೀಡಿರುವುದು ಅತ್ಯಂತ ದುರದೃಷ್ಟಕರ. ದೂರುದಾರರ ಈ ನಡೆಯು ನ್ಯಾಯಮೂರ್ತಿಯ ಘನತೆಯನ್ನು ಕುಂದಿಸಿರುವುದಲ್ಲದೇ ರಾಜ್ಯಪಾಲರ ಹುದ್ದೆಯ ವರ್ಚಸ್ಸನ್ನು ಕುಂದಿಸಿದೆ” ಎಂದಿತ್ತು.

Also Read
ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ಮನವಿ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್‌

ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಾಕಷ್ಟು ಸಾಕ್ಷ್ಯಗಳನ್ನು ಹೊಂದಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. “ಅರ್ಜಿದಾರರ ಮನವಿಯ ಹೊರತಾಗಿಯೂ ನಾಲ್ಕನೇ ಪ್ರತಿವಾದಿ ವಿರುದ್ಧ ಮೊದಲ ಮತ್ತು ಮೂರನೇ ಪ್ರತಿವಾದಿಗಳು ಕ್ರಮಕೈಗೊಳ್ಳದಿರುವುದು ಸ್ವೇಚ್ಛೆ ಮಾತ್ರವಲ್ಲ ಕಾನೂನುಬಾಹಿರವಾಗಿದೆ. ಕ್ರಮಕೈಗೊಳ್ಳಬೇಕಾದ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಕ್ರಮಕೈಗೊಂಡಿಲ್ಲ” ಎಂದು ಮನವಿಯಲ್ಲಿ ಹೇಳಿದ್ದಾರೆ.

ತಮ್ಮ ಮನವಿಯನ್ನು ಆಧರಿಸಿ ಕ್ರಮಕೈಗೊಳ್ಳಬೇಕು ಮತ್ತು ನಿವೃತ್ತ ನ್ಯಾ. ಇಂದ್ರಕಲಾ ಅವರ ವಿರುದ್ಧ ಕ್ರಮದ ಜೊತೆಗೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವುದರ ಕುರಿತು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

Kannada Bar & Bench
kannada.barandbench.com