ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ.
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ವಿರೂಪಾಕ್ಷಪ್ಪ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತಕುಮಾರ್ ಅವರು ನಡೆಸಿದರು.
ಅರ್ಜಿದಾರ ವಿರೂಪಾಕ್ಷಪ್ಪ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷರಾಗಿದ್ದ ಮಾಡಾಳ್ ಅವರಿಗೆ ಟೆಂಡರ್ ಕರೆಯುವ ಅಧಿಕಾರ ಇರಲಿಲ್ಲ. ಹಣ ಸಿಕ್ಕಿದೆ ಎನ್ನಲಾದ ಸ್ಥಳವು ಶಾಸಕರಿಗೆ ಸೇರಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಂಧನ ಮಾಡಲಾಗಿಲ್ಲ. ಇಷ್ಟು ಮಾತ್ರವಲ್ಲದೇ ಪ್ರಕರಣದ ವಿಚಾರಣೆ ಮುಗಿದಿರುವುದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು” ಎಂದು ವಾದಿಸಿದರು.
ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸಿದ್ದ ಸರ್ಕಾರಿ ವಿಶೇಷ ಅಭಿಯೋಜಕರಾದ ಸಂತೋಷ್ ನಾಗರಾಳೆ ಅವರು “ಮಾಡಾಳ್ ಅವರ ಪುತ್ರ ಪ್ರಶಾಂತ್ ಅವರು ಮನೆಯ ಮಾಲೀಕರಾಗಿದ್ದು, ಮನೆಗೆ ವಿರೂಪಾಕ್ಷಪ್ಪ ಬಂದಾಗ ಆ ನಿರ್ದಿಷ್ಟ ಕೊಠಡಿಯಲ್ಲಿ ತಂಗುತ್ತಿದ್ದರು ಎಂದು ಪ್ರಶಾಂತ್ ಅವರ ಪತ್ನಿ ತಿಳಿಸಿದ್ದಾರೆ. ಈ ಮನೆಯಲ್ಲಿ 6.10 ಕೋಟಿ ರೂಪಾಯಿಗೂ ಅಧಿಕ ಹಣ ಅಧಿಕಾರಿಗಳಿಗೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿಯಮಾವಳಿಗಳ ಪ್ರಕಾರವೇ ವಿರೂಪಾಕ್ಷಪ್ಪ ಅವರ ಬಂಧನವಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚು” ಎಂದು ವಾದಿಸಿದರು. ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.
ಪುತ್ರ ಪ್ರಶಾಂತ್ ಜಾಮೀನು ಅರ್ಜಿ ವಜಾ: ಶಾಸಕ ಮಾಡಾಳ್ ಸೂಚನೆಯಂತೆ ಕಚೇರಿಯಲ್ಲಿ 40 ಲಕ್ಷ ರೂಪಾಯಿ ಲಂಚ ಪಡೆಯುವ ಸಿಕ್ಕಿಬಿದ್ದಿದ್ದ ಶಾಸಕರ ಪುತ್ರ ಎಂ ವಿ ಪ್ರಶಾಂತ್ ಕುಮಾರ್ ಅವರಿಗೆ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರಾಕರಿಸಿದೆ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಎರಡನೇ ಆರೋಪಿಯಾದ ಪ್ರಶಾಂತ್ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಮೂರನೇ ಆರೋಪಿ ಸುರೇಂದ್ರ ಅವರು ಪ್ರಶಾಂತ್ ಸೂಚನೆಯಂತೆ ವಾಹನದಲ್ಲಿ ಹಣ ಇಟ್ಟಿದ್ದಾರೆ ಎಂಬುದನ್ನು ಹೊರತುಪಡಿಸಿ ಅವರ ವಿರುದ್ಧ ಯಾವುದೇ ಆರೋಪವಿಲ್ಲ ಎಂದಿರುವ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ. ಐದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಇಬ್ಬರು ಭದ್ರತೆ ಒದಗಿಸಲು ಸುರೇಂದ್ರ ಅವರಿಗೆ ನ್ಯಾಯಾಲಯವು ನಿರ್ದೇಶಿಸಿದೆ.
ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 7(ಎ) ಮತ್ತು 7(ಬಿ), 7ಎ, 8 ಮತ್ತು 9ರ ಅಡಿ ಪ್ರಕರಣ ದಾಖಲಿಸಿದ್ದಾರೆ.