ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ: ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್; ವಿಚಾರಣಾ ಹಂತ ತಲುಪಿದ ಪ್ರಕರಣ

ಐವರು ಮಹಿಳಾ ಕುಸ್ತಿಪಟುಗಳು ಬ್ರಿಜ್‌ಭೂಷಣ್‌ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಘನತೆಗೆ ಕುತ್ತು ತಂದ ಆರೋಪ ಮಾಡಿದ್ದರು.
Brij Bhushan Sharan Singh
Brij Bhushan Sharan SinghFacebook

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಸಿಂಗ್‌ ಅವರು ತಾನು ಯಾವುದೇ ಅಪರಾಧ ಮಾಡಿಲ್ಲ ಎಂದರು.

'ನಿಮ್ಮ ತಪ್ಪನ್ನುಒಪ್ಪಿಕೊಂಡು, ನೀವು ತಪ್ಪಿತಸ್ಥರು ಎಂದು ಒಪ್ಪಿಕೊಳ್ಳುತ್ತೀರಾ?' ಎಂಬುದಾಗಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ಪ್ರಿಯಾಂಕಾ ರಾಜ್‌ಪೂತ್ ಸಿಂಗ್ ಅವರು ಪ್ರಶ್ನಿಸಿದಾಗ ಸಿಂಗ್‌ ಅವರು, “ಆ ಪ್ರಶ್ನೆಯೇ ಉದ್ಭವಿಸದು. ನಾನು ಯಾವುದೇ ತಪ್ಪೆಸಗಿಲ್ಲ” ಎಂದರು.

ಸಹ ಆರೋಪಿ ವಿನೋದ್ ತೋಮರ್ ಅವರು ಕೂಡ ತಾನು ನಿರಪರಾಧಿ ಎಂದರು. ಪರಿಣಾಮ ಪ್ರಕರಣದಲ್ಲಿ ಆರೋಪವನ್ನು ಹೊತ್ತಿರುವವರು ದೋಷಿಗಳೋ ಅಲ್ಲವೋ ಎನ್ನುವುದನ್ನು ನಿರ್ಧರಿಸಲು ವಿಚಾರಣೆ ಆರಂಭವಾಗಲಿದೆ.

ಐವರು ಮಹಿಳಾ ಕುಸ್ತಿಪಟುಗಳು ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಮತ್ತು  ಘನತೆಗೆ ಕುತ್ತು ತಂದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇ 10 ರಂದು ಅವರ ವಿರುದ್ಧ ಆರೋಪ ನಿಗದಿಪಡಿಸಿತ್ತು.

ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆ ಘನತೆಗೆ ಧಕ್ಕೆ), 354ಎ (ಲೈಂಗಿಕ ಅವಾಚ್ಯ ಶಬ್ದ ಬಳಕೆ) ಮತ್ತು ಇಬ್ಬರು ಕುಸ್ತಿಪಟುಗಳಿಗೆ ಸಂಬಂಧಿಸಿದಂತೆ ಐಪಿಸಿಯ ಸೆಕ್ಷನ್ 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ  ಸಿಂಗ್‌ ವಿರುದ್ಧ ಆರೋಪ ನಿಗದಿಪಡಿಸಲು ಸಾಕಷು ಸಾಕ್ಷ್ಯಗಳಿವೆ ಎಂದು ನ್ಯಾ. ಪ್ರಿಯಾಂಕಾ ತಿಳಿಸಿದ್ದರು.

ಪ್ರಕರಣದ ಮೊದಲನೇ ಸಂತ್ರಸ್ತೆಗೆ ಕ್ರಿಮಿನಲ್‌ ಬೆದರಿಕೆಯೊಡ್ಡಿದ್ದಕ್ಕಾಗಿ ಕುಸ್ತಿ ಒಕ್ಕೂಟದ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಆರೋಪ ನಿಗದಿಪಡಿಸಲಾಗಿತ್ತು.

Kannada Bar & Bench
kannada.barandbench.com