

ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡಿದ ಆರೋಪದ ಮೇಲೆ ಉಕ್ರೇನ್ ಪಡೆಗಳಿಂದ ಬಂಧಿತನಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿ ಸಾಹಿಲ್ ಮಜೋತಿಯನ್ನು ಮರಳಿ ಕರೆತರಲು ಗಂಭೀರ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ [ಹಸೀನಾಬೆನ್ ಸಂಸುದಿನ್ಭಾಯ್ ಮಜೋತಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ತನ್ನ ವಿರುದ್ಧ ಸುಳ್ಳೇ ಮಾದಕ ವಸ್ತು ಪ್ರಕರಣ ದಾಖಲಿಸಲಾಗಿತ್ತು. ಜೈಲುಶಿಕ್ಷೆ ತಪ್ಪಬೇಕೆಂದರೆ ರಷ್ಯಾ ಸೇನೆ ಸೇರುವಂತೆ ಒತ್ತಾಯಿಸಲಾಯಿತು ಎಂದು ವಿದ್ಯಾರ್ಥಿ ಸಾಹಿಲ್ ಮಜೋತಿ ಹೇಳಿಕೊಂಡಿದ್ದ. ಮಗನನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವುದಕ್ಕಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಆತನ ತಾಯಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ರಷ್ಯಾ ಸೇನೆ ಸೇರುವಂತೆ ಆತನ ಮೇಲೆ ಒತ್ತಡ ಹೇರಿರಬೇಕು. ಆದ್ದರಿಂದ ಆತ ರಾಯಭಾರ ಕಚೇರಿ ಸಂಪರ್ಕಿಸಲು ಆತನಿಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ನ್ಯಾ. ಸಚಿನ್ ದತ್ತ ಸೂಚಿಸಿದರು.
ಯುಕ್ರೇನ್‌ಗೆ ತೆರಳಿದ ಬಳಿಕ ಮಜೋತಿ ಯುಕ್ರೇನ್ ಪಡೆಗಳೆದುರು ಸ್ವಯಂಪ್ರೇರಣೆಯಿಂದ ಶರಣಾಗಿದ್ದ ಎಂದು ಕೇಂದ್ರ ಸರ್ಕಾರ ತಿಳಿಸಿತು. ಯುಕ್ರೇನಿಯನ್ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಸಂಪರ್ಕ ಅಧಿಕಾರಿಯನ್ನು ನೇಮಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮಜೋತಿ ಅವರ ತಾಯಿ ಹಸೀನಾಬೆನ್ ಮಜೋತಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ . ತಮ್ಮ ಮಗ 2024ರ ಜನವರಿಯಲ್ಲಿ ರಷ್ಯಾದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಲು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಹೋಗಿದ್ದ. ಅಲ್ಲಿಯೇ ಅವನು ಕುರಿಯರ್ ಕೆಲಸಕ್ಕೆ ಸೇರಿಕೊಂಡಿದ್ದ. ಸುಳ್ಳುಮಾದಕ ವಸ್ತ ಪ್ರಕರಣದಲ್ಲಿ ಆತನನ್ನು ಸಿಲುಕಿಸಿ ಏಪ್ರಿಲ್ 2024ರಲ್ಲಿ ಬಂಧಿಸಲಾಗಿತ್ತು. ನಂತರ ಆತನೊಂದಿಗೆ ಸಂಪರ್ಕ ಕಡಿದುಹೋಗಿತ್ತು. ಉಕ್ರೇನ್ ಜೊತೆಗಿನ ರಷ್ಯಾ ಯುದ್ಧದಲ್ಲಿ ಭಾಗಿಯಾಗುವಂತೆ ಆತನಿಗೆ ಒತ್ತಾಯಿಸಲಾಗಿತ್ತು ಎಂದು ಹೇಳಿದ್ದರು.
ಉಕ್ರೇನ್-ರಷ್ಯಾ ಯುದ್ಧದಲ್ಲಿ ಹೋರಾಡಿದ್ದಕ್ಕಾಗಿ ಭಾರತೀಯ ಪ್ರಜೆಯನ್ನು ಬಂಧಿಸಿದ ಮೊದಲ ಪ್ರಕರಣ ಮಜೋತಿಯದ್ದಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಡಿಸೆಂಬರ್ 3ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.