ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮುರಿದ ಆಸನಗಳ ಮೇಲೇ ಕೂರುವಂತಾಗಿದ್ದ ಇಬ್ಬರು ಹಿರಿಯ ನಾಗರಿಕರಿಗೆ ರೂ 50,000 ದಂಡ ಪಾವತಿಸುವಂತೆ ಚಂಡೀಗಢದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ [ರಾಜೇಶ್ ಚೋಪ್ರಾ ಮತ್ತು ಏರ್ ಇಂಡಿಯಾ ಲಿಮಿಟೆಡ್ ನಡುವಣ ಪ್ರಕರಣ].
ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಆಸನಗಳು ದೋಷಪೂರಿತವಾಗಿದ್ದು ದೂರುದಾರರಿಗೆ ದೈಹಿಕ ಅನಾನುಕೂಲತೆ ಉಂಟು ಮಾಡಿದೆ ಎಂದು ಅಧ್ಯಕ್ಷ ಪವನ್ಜಿತ್ ಸಿಂಗ್ ಮತ್ತು ಸದಸ್ಯ ಸುರೇಶ್ ಕುಮಾರ್ ಸರ್ದಾನಾ ಅವರನ್ನೊಳಗೊಂಡ ಆಯೋಗ ತಿಳಿಸಿದೆ.
"ದೂರುದಾರರು ನ್ಯೂಯಾರ್ಕ್‌ನಿಂದ ದೆಹಲಿಗೆ ರೂ 8,24,964 ಮೊತ್ತಕ್ಕೆ ಎರಡು ಬಿಸ್ನೆಸ್ ಕ್ಲಾಸ್ ವಿಮಾನ ಟಿಕೆಟ್‌ಗಳನ್ನು ಖರೀದಿಸಿದ್ದರು. ದೂರುದಾರರಿಗೆ ನಿಗದಿಪಡಿಸಿದ್ದ ಆಸನಗಳು ಹಿಂದೆ ಮುಂದೆ ಚಲಿಸದೆ ದೋಷಪೂರಿತವಾಗಿದ್ದವು. ಪರಿಣಾಮ ದೂರುದಾರರು ವಿಮಾನ ಪ್ರಯಾಣದುದ್ದಕ್ಕೂ ಕಾಲುಗಳು ಊದಿ ಅಸ್ವಸ್ಥತೆಗೆ ಈಡಾದರು" ಎಂದು ಫೆ. 2ರಂದು ನೀಡಿದ ಆದೇಶದಲ್ಲಿ ಆಯೋಗ ತಿಳಿಸಿದೆ.
ತಾವು ತೊಂದರೆಯಿಲ್ಲದೆ ಆರಾಮದಾಯಕವಾಗಿ ಪಯಣಿಸಬಹುದು ಎಂಬ ಕಾರಣಕ್ಕೇ 8 ಲಕ್ಷ ರೂಪಾಯಿಗಳಿಗೆ ಬಿಸ್ನೆಸ್ ಕ್ಲಾಸ್ ಟಿಕೆಟ್ ಕಾಯ್ದಿರಿಸಿದ್ದೆವು. ತಮ್ಮಲ್ಲಿ ಒಬ್ಬರು ಅಂಗವಿಕಲರಾಗಿದ್ದು ಅವರನ್ನು ಫಿಸಿಯೋಥೆರಪಿಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು ಎಂದು ಅರ್ಜಿದಾರರು ಮಾಹಿತಿ ನೀಡಿದ್ದರು.
ವಿಮಾನದಲ್ಲಿನ ಆಸನಗಳು ಮುರಿದಿದ್ದರಿಂದ ಪಾದಗಳನ್ನು ಊರಲು ಸ್ಟೂಲ್ ಬಳಸಬೇಕಾಯಿತು. ದೂರುಗಳ ಹೊರತಾಗಿಯೂ ಪರಿಸ್ಥಿತಿಯನ್ನು ಸರಿಪಡಿಸಲು ವಿಮಾನಯಾನ ಸಂಸ್ಥೆ ವಿಫಲವಾಗಿದ್ದರಿಂದ ಕಾನೂನು ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ದೂರುದಾರರು ತಿಳಿಸಿದ್ದರು.
ವಾದ ಆಲಿಸಿದ ಆಯೋಗ ದೂರುದಾರರು ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಿರುಕುಳಕ್ಕಾಗಿ ರೂ 50,000 ಪರಿಹಾರ ಮತ್ತು ದಾವೆ ವೆಚ್ಚವಾಗಿ ರೂ 10,000 ನೀಡುವಂತೆ ಆದೇಶಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]