ವೇಶ್ಯಾವಾಟಿಕೆಯ ಗ್ರಾಹಕರ ವಿರುದ್ಧ ಅನೈತಿಕ ಮಾನವ ಕಳ್ಳಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು: ಕೇರಳ ಹೈಕೋರ್ಟ್

ಐಟಿಪಿ ಕಾಯ್ದೆಯು "ಒದಗಿಸುವುದು" ಎಂಬ ಪದವನ್ನು ವ್ಯಾಖ್ಯಾನಿಸದಿದ್ದರೂ, ಕಾಯ್ದೆಯ ಸೆಕ್ಷನ್ 5 "ವೇಶ್ಯಾವಾಟಿಕೆಗಾಗಿ ವ್ಯಕ್ತಿಯನ್ನು ಒದಗಿಸುವುದು, ಪ್ರಚೋದಿಸುವುದು ಅಥವಾ ಕರೆತರುವುದು" ಎಂದು ದಂಡನೆ ವಿಧಿಸುತ್ತದೆ ಎಂದ ನ್ಯಾಯಾಲಯ.
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್

ಅನೈತಿಕ ಮಾನವ ಸಾಗಣೆ (ತಡೆಗಟ್ಟುವಿಕೆ) ಕಾಯ್ದೆ, 1956 (ಐಟಿಪಿ ಕಾಯ್ದೆ) ಅಡಿಯಲ್ಲಿ ವೇಶ್ಯಾಗೃಹದಲ್ಲಿರುವ ಗ್ರಾಹಕರನ್ನು ಬಂಧಿಸಬಹುದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಅಭಿಜಿತ್ ವಿರುದ್ಧ ಕೇರಳ ರಾಜ್ಯ].

ಐಟಿಪಿ ಕಾಯ್ದೆಯು "ಒದಗಿಸುವಿಕೆ" ಎಂಬ ಪದವನ್ನು ವ್ಯಾಖ್ಯಾನಿಸದಿದ್ದರೂ, ಕಾಯ್ದೆಯ ಸೆಕ್ಷನ್ 5 "ವೇಶ್ಯಾವಾಟಿಕೆಗಾಗಿ ವ್ಯಕ್ತಿಯನ್ನು ಒದಗಿಸುವುದು, ಪ್ರಚೋದಿಸುವುದು ಅಥವಾ ಕರೆತರುವುದು" ಎಂದು ವಿವರಿಸಿ ದಂಡ ವಿಧಿಸುತ್ತದೆ ಎಂದು ನ್ಯಾಯಮೂರ್ತಿ ಪಿ ಜಿ ಅಜಿತ್ ಕುಮಾರ್ ಪ್ರಕರಣವೊಂದರ ಆದೇಶದ ವೇಳೆ ಹೇಳಿದ್ದಾರೆ.

ಆದ್ದರಿಂದ, 'ಒದಗಿಸುವಿಕೆ' ಎಂಬ ಪದವನ್ನು ಬಳಸಿದ ಸಂದರ್ಭದಲ್ಲಿ ಕಾನೂನಿನ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಐಟಿಪಿ ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ವೇಶ್ಯಾಗೃಹದಲ್ಲಿ ಗ್ರಾಹಕರು ಅಥವಾ ಗಿರಾಕಿ ಶಿಕ್ಷಾರ್ಹರು ಎಂದು ನ್ಯಾಯಾಲಯ ತೀರ್ಮಾನಿಸಿತು.

ಶಾಸನದ ಉದ್ದೇಶಗಳು ಮತ್ತು ಕಾರಣಗಳಲ್ಲಿ ತಿಳಿಸಿರುವಂತೆ ಶಾಸನದ ಮುಖ್ಯ ಉದ್ದೇಶವೆಂದರೆ ಮಹಿಳೆಯರು ಮತ್ತು ಹುಡುಗಿಯರ ಕಳ್ಳಸಾಗಣೆಯನ್ನು ಹಾಗೂ ದುರಾಚಾರಗಳ ವಾಣಿಜ್ಯೀಕರಣವನ್ನು ತಡೆಯುವುದಾಗಿರುತ್ತದೆ. ಮೆರಿಯಮ್ ವೆಬ್‌ಸ್ಟರ್‌ ನಿಘಂಟಿನಲ್ಲಿ ನೀಡಲಾದ 'ಪ್ರೊಕ್ಯೂರ್‌' (ಸಂಗ್ರಹಣೆ/ಒದಗಣೆ) ಎಂಬ ಪದದ ಅರ್ಥವೆಂದರೆ ಸ್ವಾಧೀನಪಡಿಸಿಕೊಳ್ಳುವುದು; ಅಥವಾ ಏನನ್ನಾದರೂ ಪಡೆಯುವುದು. 'ಪ್ರೊಕ್ಯೂರ್' ಎಂಬ ಪದದ ಅರ್ಥವನ್ನು ಶಾಸನದಲ್ಲಿ ತಿಳಿಸಲಾದ ಉದ್ದೇಶದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡರೆ, ವೇಶ್ಯಾವಾಟಿಕೆಯ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿಯ ಮೇಲೆ ಅಧಿಕಾರವನ್ನು ಪಡೆಯುವುದು ಅಥವಾ ಹೊಂದುವುದು ಎಂದಾಗುತ್ತದೆ. ಈ ವಿಷಯದ ದೃಷ್ಟಿಯಿಂದ, ಗ್ರಾಹಕರು ಸಹ ಐಟಿಪಿ ಕಾಯ್ದೆಯ ಸೆಕ್ಷನ್ 5 ರ ವ್ಯಾಪ್ತಿಯಲ್ಲಿ ಬರುತ್ತಾರೆ" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ. t,

ವೇಶ್ಯಾಗೃಹದಲ್ಲಿ ಗ್ರಾಹಕನಾಗಿ ಪತ್ತೆಯಾದ ವ್ಯಕ್ತಿಯೊಬ್ಬರು ಸಲ್ಲಿಸಿದ ಕ್ರಿಮಿನಲ್ ಪರಿಶೀಲನಾ ಅರ್ಜಿಯ ಮೇರೆಗೆ ಈ ತೀರ್ಪು ನೀಡಲಾಗಿದೆ. ಐಟಿಪಿ ಕಾಯ್ದೆಯ ಸೆಕ್ಷನ್ 3 (ವೇಶ್ಯಾಗೃಹ ನಡೆಸುವುದು ಅಥವಾ ವೇಶ್ಯಾಗೃಹ ನಡೆಸಲು ಸ್ಥಳ ಒದಗಿಸುವುದು), 4 (ವೇಶ್ಯಾವಾಟಿಕೆಯ ಸಂಪಾದನೆಯಿಂದ ಬದುಕುವುದು), 5 (ವೇಶ್ಯಾವಾಟಿಕೆಗೆ ವ್ಯಕ್ತಿಯನ್ನು ಒದಗಿಸುವುದು, ಪ್ರಚೋದಿಸುವುದು ಅಥವಾ ಕರೆತರುವುದು) ಮತ್ತು 7 (ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ನಡೆಸುವುದು) ಅಡಿಯಲ್ಲಿ ಅಪರಾಧಗಳನ್ನು ಆರೋಪಿಯ ವಿರುದ್ಧ ಮಾಡಲಾಗಿತ್ತು.

ಅರ್ಜಿದಾರರು ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತಮ್ಮನ್ನು ಪ್ರಕರಣದಿಂ ಕೈಬಿಡಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅದನ್ನು ವಜಾಗೊಳಿಸಲಾಯಿತು ಮತ್ತು ಅವರ ವಿರುದ್ಧ ಆರೋಪಗಳನ್ನು ನಿಗದಿಪಡಿಸಲು ನಿರ್ದೇಶಿಸಲಾಯಿತು. ಈ ನಿರ್ಧಾರದ ವಿರುದ್ಧ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು.

ಐಟಿಪಿ ಕಾಯ್ದೆಯ ನಿಬಂಧನೆಗಳನ್ನು ಪರಿಶೀಲಿಸಿದ ನಂತರ ಮತ್ತು ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಪರಿಶೀಲಿಸಿದ ಮೇಲೆ, ನ್ಯಾಯಾಲಯವು ಸೆಕ್ಷನ್ 3, 4 ಮತ್ತು 7 ರ ಅಡಿಯ ಅಪರಾಧಗಳಿಗಾಗಿ ಅರ್ಜಿದಾರರನ್ನು ಖುಲಾಸೆಗೊಳಿಸಿತು. ಆದಾಗ್ಯೂ, ಅರ್ಜಿದಾರರು ಸೆಕ್ಷನ್ 5 ರ ಅಡಿಯಲ್ಲಿ ಆರೋಪ ಹೊರಲು ಅರ್ಹರು ಎಂದು ಅದು ಅಭಿಪ್ರಾಯಪಟ್ಟಿತು.

[ತೀರ್ಪು ಓದಿ]

Attachment
PDF
Abhijith v. State of Kerala.pdf
Preview
Kannada Bar & Bench
kannada.barandbench.com