ಹಾಲಿವುಡ್ ತಾರೆ ಡೆಪ್ ಪರ ವಕಾಲತ್ತು ವಹಿಸಿದ್ದ ಕಮೀಲ್‌ಗೆ ಪಾಲುದಾರಿಕೆಯ ಗೌರವ ನೀಡಿದ ಅಮೆರಿಕ ಕಾನೂನು ಸಂಸ್ಥೆ

ಸಂಸ್ಥೆ ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆಗೆ ಪಾಲುದಾರರನ್ನು ಪ್ರಕಟಿಸುತ್ತದೆ. ಆದರೆ ಜಾನಿ ಡೆಪ್ ಪ್ರಕರಣದ ವಿಚಾರಣೆ ವೇಳೆ ಕಮೀಲ್‌ ತೋರಿದ ಕಾರ್ಯಕ್ಷಮತೆಯ ಕಾರಣಕ್ಕೆ ಈಗಲೇ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಲು ಅದು ನಿರ್ಧರಿಸಿದೆ.
Camille Vasquez
Camille Vasquez

ಹಾಲಿವುಡ್‌ ಪ್ರಸಿದ್ಧ ನಟ, 'ಪೈರೇಟ್ಸ್ ಆಫ್‌ ಕೆರೆಬಿಯನ್‌' ಸರಣಿ ಸಿನಿಮಾ ಖ್ಯಾತಿಯ ಜಾನಿ ಡೆಪ್‌ ವಿರುದ್ಧ ಅವರ ಮಾಜಿ ಪತ್ನಿ ಹಾಗೂ ನಟಿ ಆಂಬರ್‌ ಹರ್ಡ್‌ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಡೆಪ್‌ ಅವರ ಕಾನೂನು ತಂಡದ ಪ್ರಮುಖ ಸದಸ್ಯರಾಗಿದ್ದ ವಕೀಲೆ ಕಮೀಲ್‌ ವಾಸ್ಕೆಜ್ ಅವರಿಗೆ ಅಮೆರಿಕದ ಹೆಸರಾಂತ ಕಾನೂನು ಸಂಸ್ಥೆ ಬ್ರೌನ್ ರುಡ್ನಿಕ್ ತನ್ನ ಪಾಲುದಾರೆಯಾಗಿ ಪದೋನ್ನತಿ ನೀಡಿದೆ.

ಈ ವಿಚಾರವನ್ನು ಮಂಗಳವಾರ ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕಮೀಲ್ ಅವರು ಸೌತ್‌ವೆಸ್ಟರ್ನ್ ಕಾನೂನು ಶಾಲೆಯ 2010ನೇ ಸಾಲಿನ ಪದವೀಧರೆ. 2006ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಿಂದ ಮ್ಯಾಗ್ನಾ ಕಮ್ ಲಾಡ್ನೊಂದಿಗೆ (ಮ್ಯಾಗ್ನಾ ಕಮ್ ಲಾಡ್‌- ಅತಿ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಟಿನ್‌ ಗೌರವ) ಸ್ನಾತಕೋತ್ತರ ಪದವಿ ಪಡೆದರು.

ದಾವೆ ಮತ್ತು ಮಧ್ಯಸ್ಥಿಕೆ ಪ್ರಕರಣಗಳ ಸಹಾಯಕಿಯಾಗಿ ಕ್ಯಾಲಿಫೋರ್ನಿಯಾದ ಆರೆಂಜ್‌ ಕೌಂಟಿಯಲ್ಲಿರುವ ಬ್ರೌನ್ ರುಡ್ನಿಕ್ ಕಾನೂನು ಸಂಸ್ಥೆಗೆ ಕ್ಯಾಮಿಲ್ಲೆ 2018ರಲ್ಲಿ ಸೇರ್ಪಡೆಯಾದರು. ಮಾನನಷ್ಟ ಪ್ರಕರಣ, ಒಪ್ಪಂದ ವ್ಯಾಜ್ಯ, ವ್ಯಾಪಾರ-ಸಂಬಂಧಿತ ವಿವಾದ, ಉದ್ಯೋಗ ದಾವೆ ಸೇರಿದಂತೆ ವಿಚಾರಣಾ ವಕೀಲರಾಗಿ ಅವರು 10 ವರ್ಷಗಳಿಗಿಂತ ಹೆಚ್ಚು ಅನುಭವ ಪಡೆದಿದ್ದಾರೆ.

ಕಾನೂನು ಸಂಸ್ಥೆ ಸಾಮಾನ್ಯವಾಗಿ ಆರ್ಥಿಕ ವರ್ಷದ ಕೊನೆಗೆ ಪಾಲುದಾರರನ್ನು ಪ್ರಕಟಿಸುತ್ತದೆ. ಆದರೆ ಜಾನಿ ಡೆಪ್‌ ಪ್ರಕರಣದ ವಿಚಾರಣೆ ವೇಳೆ ಕಮೀಲ್ ತೋರಿದ ಕಾರ್ಯಕ್ಷಮತೆಯ ಕಾರಣಕ್ಕೆ ಈಗಲೇ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ವಿಲಿಯಂ ಬಾಲ್ಡಿಗಾ ತಿಳಿಸಿದ್ದಾರೆ. ಸಂಸ್ಥೆ ತನ್ನ ಮೇಲಿಟ್ಟಿರುವ ವಿಶ್ವಾಸ ಕುರಿತಂತೆ ಕಮೀಲ್‌ ಹರ್ಷ ವ್ಯಕ್ತಪಡಿಸಿದ್ದಾರೆ.

Also Read
ಕೇರಳ ನಟಿ ಮೇಲಿನ ಹಲ್ಲೆ ಪ್ರಕರಣ: ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಪ್ರಧಾನ ಆರೋಪಿ ಪಲ್ಸರ್ ಸುನಿ [ಚುಟುಕು]

ಏನಿದು ಪ್ರಕರಣ?

2015ರಲ್ಲಿ ವಿವಾಹವಾಗಿದ್ದ ಡೆಪ್‌ ಮತ್ತು ಆಂಬರ್‌ ದಾಂಪತ್ಯ ಒಂದೇ ವರ್ಷಕ್ಕೆ ಬಿರುಕು ಬಿಟ್ಟಿತ್ತು. ಮಾದಕವಸ್ತು ಮತ್ತು ಮದ್ಯದ ನಶೆಯಲ್ಲಿ ಡೆಪ್‌ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಆಂಬರ್‌ ಆರೋಪಿಸಿದ್ದರು. 2017ರಲ್ಲಿ ಅವರಿಗೆ ವಿಚ್ಛೇದನ ದೊರೆತಿತ್ತು.

ತಾನು ಅನುಭವಿಸಿದ ಕೌಟುಂಬಿಕ ದೌರ್ಜನ್ಯ, ಕಿರುಕುಳ ವಿವರಿಸಿ 'ವಾಷಿಂಗ್‌ಟನ್‌ ಪೋಸ್ಟ್‌' ಪತ್ರಿಕೆಯಲ್ಲಿ ಆಂಬರ್‌ ಲೇಖನವೊಂದನ್ನು ಬರೆದಿದ್ದರು. ಇದಕ್ಕೆ ಜಾನಿ ಡೆಪ್‌ ಬಲವಾದ ಆಕ್ಷೇಪ ಎತ್ತಿದ್ದರು. ಇದರಿಂದಾಗಿ ಸಾರ್ವಜನಿಕ ಜೀವನದಲ್ಲಿರುವ ತಮಗೆ ಮಾನಹಾನಿ ಉಂಟಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರತಿಯಾಗಿ ಆಂಬರ್‌ ಕೂಡ ಪ್ರಕರಣ ದಾಖಲಿಸಿದ್ದರು.

ವಾಸ್ತವವಾಗಿ ಇಬ್ಬರೂ ತಪ್ಪಿತಸ್ಥರು ಹೀಗಾಗಿ ಇಬ್ಬರೂ ಪರಸ್ಪರ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಆಂಬರ್‌ ಅವರು ಡೆಪ್‌ ಅವರಿಗೆ ರೂ 115 ಕೋಟಿ ಪರಿಹಾರ ನೀಡಬೇಕು. ಅಂತೆಯೇ ಡೆಪ್‌ ಅವರು ಆಂಬರ್‌ ಅವರಿಗೆ ರೂ 15 ಕೋಟಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿತ್ತು. ಈ ಬಗ್ಗೆ ಡೆಪ್‌ ಹರ್ಷ ವ್ಯಕ್ತಪಡಿಸಿದ್ದರು ಈ ಹಿನ್ನೆಲೆಯಲ್ಲಿನಿನ್ನೆ ಬರ್ಮಿಂಗ್‌ಹ್ಯಾಮ್‌ನ ವಾರಾಣಸಿ ಎನ್ನುವ ಭಾರತ ಮೂಲದ ರೆಸ್ಟುರಾದಲ್ಲಿ ದೊಡ್ಡ ಔತಣಕೂಟ ಏರ್ಪಡಿಸಿದ್ದರು. ಔತಣಕೂಟಕ್ಕೆಂದು ರೂ 48 ಲಕ್ಷ ಬಿಲ್‌ ಪಾವತಿಸಿದ್ದು ಸುದ್ದಿಯಾಗಿತ್ತು. ಇತ್ತ ಆಂಬರ್‌ ಅವರಿಗೆ ತೀರ್ಪಿನಿಂದ ಅತೃಪ್ತಿ ಉಂಟಾಗಿದೆ ಎಂದು ವರದಿಯಾಗಿದೆ.

Related Stories

No stories found.
Kannada Bar & Bench
kannada.barandbench.com