ಬಿಆರ್‌ಟಿ ಟೆಂಡರ್‌: ಖಾಸಗಿ ಕಂಪನಿ ಕಪ್ಪು ಪಟ್ಟಿಗೆ ಸಲ್ಲಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಕರಾರಿನಂತೆ ನೌಕರರಿಗೆ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಕಾರಣಕ್ಕಾಗಿ ಕಂಪನಿಯನ್ನು ಭವಿಷ್ಯದಲ್ಲಿನ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಕಪ್ಪುಪಟ್ಟಿಗೆ ಸೇರಿಸಿರುವ ಸರ್ಕಾರದ ಆದೇಶ ರದ್ದತಿ ಕೋರಿರುವ ಸಂಸ್ಥೆ.
Tiger
Tiger
Published on

ಸೇವಾ ವೈಫಲ್ಯದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ (ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ) ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರ ಸೇವೆ ಒದಗಿಸುತ್ತಿದ್ದ ಮೈಸೂರಿನ ಆರ್‌ ಸಿ ಬ್ಯುಸಿನೆಸ್‌ ಸಲ್ಯೂಶನ್ಸ್‌ ಕಂಪನಿಗೆ ಎರಡು ವರ್ಷ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಿ ಕಪ್ಪುಪಟ್ಟಿಗೆ ಸೇರಿಸಿದ್ದ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಮೈಸೂರಿನ ವಿ ಸಿ ಮೊಹಲ್ಲಾದಲ್ಲಿ ಕಚೇರಿ ವಿಳಾಸ ಹೊಂದಿರುವ ಕಂಪನಿಯ ಮಾಲೀಕ ಎಂ ಸಿ ಚರಣಕುಮಾರ್ ಪರ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಬಿ ಎಸ್‌ ಸಚಿನ್‌ ಅವರು “ಸರ್ಕಾರದ ಆದೇಶಕ್ಕೆ ಮುಂದಿನ ವಿಚಾರಣಾ ದಿನಾಂಕದವರೆಗೆ ಮಧ್ಯಂತರ ತಡೆ ನೀಡಿದೆ. ಅಂತೆಯೇ, ಪ್ರತಿವಾದಿಗಳಾದ ಚಾಮರಾಜನಗರ ಡಿಸಿಎಫ್‌ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಮತ್ತು ಎಸಿಎಫ್‌ಗೆ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ.

“ಕರಾರಿನಂತೆ ನೌಕರರಿಗೆ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮ ಕಂಪನಿಯನ್ನು ಭವಿಷ್ಯದಲ್ಲಿನ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಕಪ್ಪುಪಟ್ಟಿಗೆ ಸೇರಿಸಿರುವ ಸರ್ಕಾರದ ಆದೇಶ ರದ್ದುಗೊಳಿಸಬೇಕು” ಎಂದು ಕಂಪನಿ ಈ ಅರ್ಜಿ ಸಲ್ಲಿಸಿದೆ.

ಮೆಸರ್ಸ್‌ ಆರ್ ಸಿ ಬ್ಯುಸಿನೆಸ್‌ ಸಲ್ಯೂಶನ್ಸ್‌ ಕಂಪನಿಯು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆ ಅನ್ವಯ ಕರಾರು ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅವಧಿಗೆ ಯಾವುದೇ ಹೊರಗುತ್ತಿಗೆ ಸೇವೆಯನ್ನು ಒದಗಿಸುವ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಕಂಪನಿಗೆ ನಿರ್ಬಂಧ ವಿಧಿಸಿ, ಅನರ್ಹಗೊಳಿಸಲಾಗಿದೆ. ಅಂತೆಯೇ, ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಚಾಮರಾಜನಗರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು 2025ರ ನವೆಂಬರ್ 15ರಂದು ಆದೇಶಿಸಿದ್ದರು.

ಅರ್ಜಿದಾರರ ಕಂಪನಿ 2024–25ನೇ ಸಾಲಿನಲ್ಲಿ ಯಳಂದೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 122 ಜನ ಹೊರಗುತ್ತಿಗೆ ನೌಕರರಿಗೆ ಟೆಂಡರ್‌ ಕರಾರಿನಂತೆ ಸಕಾಲದಲ್ಲಿ ವೇತನ, ಇಪಿಎಫ್‌ (ನೌಕರರ ಭವಿಷ್ಯ ನಿಧಿ), ಇಎಸ್‌ಐ (ನೌಕರರ ರಾಜ್ಯ ವಿಮಾ ಯೋಜನೆ) ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಈ ಕಾರಣದಿಂದಾಗಿ ಸರ್ಕಾರದ ಆದೇಶದ ಅನುಸಾರ ಟೆಂಡರ್‌ ಸೇವಾ ಸಂಸ್ಥೆಯವರಿಂದ ಪಡೆದಿರುವ ಇಎಂಡಿ (ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಅಥವಾ ಬಿಡ್‌ದಾರರು ಸಲ್ಲಿಸಬೇಕಾದ ಮುಂಗಡ ಹಣ) ಮತ್ತು ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

ಕಂಪನಿಯು ಯಳಂದೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಯಳಂದೂರು, ಕೊಳ್ಳೇಗಾಲ ಮತ್ತು ಬೈಲೂರು ವನ್ಯಜೀವಿ ವಲಯಗಳಿಗೆ ಹೊರಗುತ್ತಿಗೆ ಆಧಾರದಡಿ ಲಿಪಿಕ ಸಹಾಯಕರು, ಕಂಪ್ಯೂಟರ್ ಆಪರೇಟರ್‌, ಲಘು ವಾಹನ ಚಾಲಕರು, ಕಳ್ಳಬೇಟೆ ತಡೆ ಶಿಬಿರದ ರಕ್ಷಣಾ ಕಾವಲುಗಾರರೂ ಸೇರಿದಂತೆ ಒಟ್ಟು 122 ನೌಕರರಿಗೆ ಹೊರಗುತ್ತಿಗೆ ಆಧಾರದಡಿ ವಿವಿಧ ಸೇವೆಗಳಲ್ಲಿ ನೌಕರರನ್ನು ಒದಗಿಸಲು ಟೆಂಡರ್‌ ಮುಖಾಂತರ ಆದೇಶ ಪಡೆದು ಕಾರ್ಯ ನಿರ್ವಹಿಸುತ್ತಿದೆ.

Kannada Bar & Bench
kannada.barandbench.com