
ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಳಸುತ್ತಿರುವ ಎತ್ತರದಲ್ಲಿ ಹಾರಾಡಬಲ್ಲ ಹೈ-ಆಲ್ಟಿಟ್ಯೂಡ್ ಡ್ರೋನ್‌ಗಳ ವಿನ್ಯಾಸ ಮತ್ತು ಅದರ ದತ್ತಾಂಶ (ಡೇಟಾ) ಕಳವು ಮಾಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಉತ್ತರ ಪ್ರದೇಶದ ಪ್ರಭಾತ್ ಶರ್ಮಾ ಮತ್ತು ಬೆಂಗಳೂರಿನ ಯಲಹಂಕದ ಆಕಾಶ್ ಎಂ.ಪಾಟೀಲ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಇಂತಹ ಪ್ರಕರಣದಲ್ಲಿ ಕಳವು ಮಾಡಿದ ದತ್ತಾಂಶದ ಪ್ರಮಾಣ ಪಡೆಯಬೇಕಿರುತ್ತದೆ. ಅರ್ಜಿದಾರ ಆರೋಪಿಗಳು ಪ್ರಕರಣದ ಸಾಕ್ಷ್ಯಗಳನ್ನು ನಾಶಮಾಡುವ ಮತ್ತು ತಿರುಚುವ ಸಾಮರ್ಥ್ಯ ಮತ್ತು ಇಚ್ಛೆ ಹೊಂದಿರುವುದನ್ನು ಕಾಣಬಹುದಾಗಿದೆ. ಸೈಬರ್ ಆರ್ಥಿಕ ಅಪರಾಧಗಳಲ್ಲಿ ವಿಶೇಷವಾಗಿ ತಾಂತ್ರಿಕ ಸ್ವರೂಪ ಹೊಂದಿರುವ ಅಪರಾಧಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸುವ ಅಗತ್ಯವಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕಾಗುತ್ತದೆ” ಎಂದು ಪೀಠ ಹೇಳಿದೆ.
ಅಲ್ಲದೆ, “ಇಂತಹ ಪ್ರಕರಣಗಳ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವುದರಿಂದ ತನಿಖೆ ಮೇಲೆ ದುಷ್ಪರಿಣಾಮ ಬೀರಬಹುದು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರೆ ಉಪಯುಕ್ತ ಮಾಹಿತಿ ಸಂಗ್ರಹಿಸಬಹುದು ಎಂಬ ನಿರೀಕ್ಷೆಯಲ್ಲಿರುವ ತನಿಖಾ ಸಂಸ್ಥೆಯನ್ನು ನಿರಾಶೆಗೊಳಿಸಿದಂತಾಗುತ್ತದೆ. ಅತ್ಯಾಧುನಿಕ ಸೈಬರ್ ಅಪರಾಧಗಳನ್ನು ಎದುರಿಸಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಸಹ ದುರ್ಬಲಗೊಳಿಸಿದಂತಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಭಾರತೀಯ ಗಡಿ ಭದ್ರತಾ ಪಡೆ ಬಳಸುತ್ತಿರುವ ಎತ್ತರದಲ್ಲಿ ಹಾರಾಟ ಮಾಡಬಲ್ಲ ಹೈ-ಆಲ್ಟಿಟ್ಯೂಡ್ ಡ್ರೋನ್‌ಗಳ ವಿನ್ಯಾಸ ಮತ್ತದರ ದತ್ತಾಂಶವನ್ನು (ಸಾಫ್ಟವೇರ್) ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಯಾದ ನ್ಯೂಸ್ಪೇಸ್ ರಿಸರ್ಚ್ ಮತ್ತು ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸಮೀರ್ ಜೋಷಿ ಅವರು 2024ರ ಡಿಸೆಂಬರ್ 25ರಂದು ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಅವರು ತಮ್ಮ ದೂರಿನಲ್ಲಿ, ಪ್ರಭಾತ್ ಶರ್ಮಾ ಮತ್ತು ಆಕಾಶ್ ಎಂ.ಪಾಟೀಲ್ ಅವರು ತಮ್ಮ ಕಂಪನಿಯ ಮಾಜಿ ಉದ್ಯೋಗಿಗಳಾಗಿದ್ದಾರೆ. ಅವರು ಸದ್ಯ ಕೆಲಸ ಮಾಡುತ್ತಿರುವ ಕಂಪನಿಯ ಲಾಭಕ್ಕಾಗಿ ಹೈ-ಆಲ್ಟಿಟ್ಯೂಡ್ ಡ್ರೋನ್‌ಗಳ ಸೋರ್ಸ್ ಕೋಡ್, ಮೂಲ ಕ್ಯಾಡ್ ಡಿಸೈನ್ ಮತ್ತು ಹಕ್ಕುಸ್ವಾಮ್ಯವನ್ನು ಕಳವು ಮಾಡಿದ್ದಾರೆ. ಜೊತೆಗೆ ತಮ್ಮ ಅಪರಾಧವನ್ನು ಮರೆ ಮಾಚಲು ದತ್ತಾಂಶ ಅಳಿಸಿಹಾಕಲು ಪಿತೂರಿ ನಡೆಸಿದ್ದಾರೆ ಆರೋಪಿಸಿದ್ದರು. ಇದರಿಂದ ಅರ್ಜಿದಾರ ಆರೋಪಿಗಳಿಗೆ ಬಂಧನ ಭೀತಿ ಎದುರಾಗಿತ್ತು. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನುಗಳನ್ನು ವಜಾಗೊಳಿಸಿ ಬೆಂಗಳೂರಿನ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು 2025ರ ಜನವರಿ 13ರಂದು ಆದೇಶಿಸಿತ್ತು.
ಹಣಕಾಸು ಲಾಭಕ್ಕಾಗಿ ಆರೋಪಿಗಳ ಎಸಗಿರುವ ಕೃತ್ಯವು ರಾಷ್ಟ್ರದ ರಕ್ಷಣಾ ದತ್ತಾಂಶವನ್ನೇ ಅಸ್ಥಿರಗೊಳಿಸುವ ರೀತಿಯಲ್ಲಿದೆ. ಹೀಗಾಗಿ, ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆ ಕಾಪಾಡುವ ಹಿತದೃಷ್ಟಿಯಿಂದ ಆರೋಪಿಗಳು ಕಳವು ಮಾಡಿದ ದತ್ತಾಂಶವನ್ನು ಮೂಲದಿಂದ ಪಡೆಯಲು ಮತ್ತು ಅಪರಾಧದಲ್ಲಿ ಆರೋಪಿಗಳ ಪಾತ್ರ ಪತ್ತೆ ಹಚ್ಚಲು ತನಿಖೆ ಮುಂದುವರಿಯಬೇಕಿದೆ. ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತನಿಖೆ ಮುಂದುವರಿಯುತ್ತಿವ ಕಾರಣ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ಸತ್ರ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತ್ತು. ಇದರಿಂದ ಆರೊಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.