ಮಹತ್ವದ ಬೆಳವಣಿಗೆಯಲ್ಲಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯಿದೆಯಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಬೆಂಗಳೂರು ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇರುವ, ವಾಸುದೇವ ರೆಡ್ಡಿ ಎನ್ನುವವರು ತಮ್ಮ ವಿರುದ್ಧ ದಾಖಲಿಸಿದ್ದ ಖಾಸಗಿ ದೂರನ್ನು ವಜಾಗೊಳಿಸುವಂತೆ ಕೋರಿದ್ದ ಬಿಎಸ್‌ವೈ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿದೆ.
ತನಿಖೆಯಲ್ಲಿ ನಿರ್ಲಕ್ಷ್ಯವನ್ನು ತೋರಿರುವ ಲೋಕಾಯುಕ್ತ ಪೊಲೀಸರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಜನಪ್ರತಿನಿಧಿಗಳನ್ನು ಒಳಗೊಂಡಿರುವ ಕ್ರಿಮಿನಲ್ ಪ್ರಕರಣದ ತನಿಖೆಗಳ ಬಗ್ಗೆ ವಿಶೇಷ ಗಮನ ವಹಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ.
ಐಟಿ ಕಾರಿಡಾರ್ ನಿರ್ಮಾಣಕ್ಕಾಗಿ ಬೆಳ್ಳಂದೂರು, ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಬಿಎಸ್‌ವೈ ವಿರುದ್ಧ ದೂರು ದಾಖಲಾಗಿತ್ತು. ಇದರ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ವಿರುದ್ಧ ದೂರುದಾರರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರಾದರೂ ಅದು ವಜಾಗೊಂಡಿತ್ತು. ಇದನ್ನು ಆಧರಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಹಾಗೂ ಅದರ ಸಂಬಂಧ ಕೈಗೊಳ್ಳಲಾಗಿರುವ ವಿಚಾರಣೆಯನ್ನು ಕೈಬಿಡುವಂತೆ ಬಿಎಸ್‌ವೈ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಬಿಎಸ್‌ವೈ ವಿರುದ್ಧದ ತನಿಖೆಗೆ 2015 ರಿಂದ 2019 ರ ನಡುವೆ ಯಾವುದೇ ತಡೆ ಇರಲಿಲ್ಲ. 2019ರಲ್ಲಷ್ಟೇ ಅವರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು. ಅದರೆ, ತಡೆ ಇಲ್ಲದೆ ಇದ್ದ ಸುದೀರ್ಘ ಅವಧಿಯಲ್ಲಿಯೂ ಸಹ ಲೋಕಾಯುಕ್ತ ಪೊಲೀಸರು ತನಿಖೆಯ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಪ್ರತಿವಾದಿಗಳ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಆದೇಶದಲ್ಲಿ, ಲೋಕಾಯಕ್ತ ಪೊಲೀಸರು ತನಿಖೆಯ ವಿಷಯದಲ್ಲಿ ತೋರಿರುವ ವಿಳಂಬ ಉದ್ದೇಶಪೂರ್ವಕ ಹಾಗೂ ಪ್ರಜ್ಞಾಪೂರ್ವಕ ಎಂದಿದೆ.
ಪ್ರಕರಣದ ತನಿಖೆಯಲ್ಲಿ ತೋರಿರುವ ವಿಳಂಬವು ಕ್ರಮಕ್ಕೆ ಅರ್ಹವಾಗಿದ್ದರೂ, ತನಿಖೆಯು ಇನ್ನೂ ಪ್ರಗತಿಯಲ್ಲಿರುವುದರಿಂದ ಹಾಗೂ ಅಂತಹ ಕ್ರಮವು ತನಿಖೆಯ ಬಗ್ಗೆ ಪೂರ್ವಗ್ರಹ ಪೀಡಿತವಾಗುವಂತೆ ಮಾಡುವುದರಿಂದ ಅದಕ್ಕೆ ಮುಂದಾಗದಂತೆ ನಿಯಂತ್ರಿಸಿಕೊಳ್ಳುತ್ತಿರುವುದಾಗಿ ಪೀಠವು ಹೇಳಿತು.
ಬಿಎಸ್‌ವೈ ಪರವಾಗಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಸಿ ವಿ ನಾಗೇಶ್ ಅವರು, ಹಿಂದೆ ಇದೇ ಪ್ರಕರಣದಲ್ಲಿ ಆರ್ ವಿ ದೇಶಪಾಂಡೆ ಅವರ ವಿರುದ್ಧದ ಎಫ್‌ಐಆರ್ ಅನ್ನು ರದ್ದುಪಡಿಸಿದ್ದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಅದೇ ಎಫ್‌ಐಆರ್ ಆಧಾರದಲ್ಲಿ ದಾಖಲಾಗಿರುವ ಬಿಎಸ್ವೈ ವಿರುದ್ಧದ ಪ್ರಕರಣ ಸಹ ಅಕ್ರಮವಾಗಿದ್ದು, ನ್ಯಾಯಿಕ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದಿದ್ದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಾಲಯವು ಈ ಹಿಂದಿನ ಆದೇಶದಲ್ಲಿ ಹೈಕೋರ್ಟ್ ಸಂಪೂರ್ಣ ಎಫ್‌ಐಆರ್ ಅನ್ನು ರದ್ದು ಪಡಿಸಿರಲಿಲ್ಲ ಎಂದಿತು. ಅಲ್ಲದೆ, ಒಂದನೇ ಆರೋಪಿಯ (ಆರ್ ವಿ ದೇಶಪಾಂಡೆ) ಪರವಾಗಿ ನೀಡಲಾದ ಆದೇಶವು ಪ್ರಸಕ್ತ ಅರ್ಜಿದಾರರಿಗೆ ಅನುಕೂಲವನ್ನೇನೂ ಖಾತ್ರಿ ಪಡಿಸಿಲ್ಲ ಎಂದಿತು.
ಅರ್ಜಿದಾರರ ವಿರುದ್ಧ ದಾಖಲಾಗಿರುವ ದೂರನ್ನು ಓದಿದರೆ ವಿಭಿನ್ನವೂ ಹಾಗೂ ಪ್ರತ್ಯೇಕವೂ ಆದ ಆರೋಪಗಳನ್ನು ಮಾಡಲಾಗಿದೆ. ಈ ಆರೋಪಗಳು ಮೇಲನೋಟಕ್ಕೇ ಗೋಚರಿಸುವಂತೆ ತನಿಖೆಯ ಅಗತ್ಯವಿರುವ ಸಂಜ್ಞೇಯ ಅಪರಾಧಗಳಾಗಿವೆ ಎಂದು ಪೀಠವು ಹೇಳಿತು. ಅರ್ಜಿದಾರರ ಪರ ಮಂಡಿಸಲಾದ ವಾದವನ್ನು ತಿರಸ್ಕರಿಸಿತು.