ಮಾನ್ಯತೆ ನವೀಕರಣಕ್ಕೆ ಕಟ್ಟಡ, ಅಗ್ನಿ ಸುರಕ್ಷತಾ ಪ್ರಮಾಣಪತ್ರ ಕಡ್ಡಾಯ: ಮುಂದಿನ ವರ್ಷದವರೆಗೆ ಸಮಯ ನೀಡಿದ ಹೈಕೋರ್ಟ್‌

ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು 2022ರ ಜೂನ್ 6ರಂದು ಶಿಕ್ಷಣ ಇಲಾಖೆ ಹೊರಡಿಸಿತ್ತು.
Justice Suraj Govindraj
Justice Suraj Govindraj
Published on

ಮಾನ್ಯತೆ ಪಡೆದುಕೊಳ್ಳಲು ಹಾಗೂ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಸೇರಿದಂತೆ ಕೆಲವು ಷರತ್ತುಗಳ ಪಾಲನೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಕಾಲಾವಕಾಶ ನೀಡಿದೆ.

ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು 2022ರ ಜೂನ್ 6ರಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸಿರುವುದು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತದೆ. ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯ ಕ್ರಮಗಳನ್ನು ಖಾಸಗಿ ಶಾಲೆಗಳಲ್ಲಿ ಬಯಸುವ ಸರ್ಕಾರ, ಅದನ್ನು ತನ್ನ ಅಧೀನದಲ್ಲಿರುವ ಸರ್ಕಾರಿ ಶಾಲೆಗಳಲ್ಲೂ ಬಯಸಬೇಕು. ಈ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಾಯಿತಿ ಸಲ್ಲದು. ಶಾಲೆಗಳಲ್ಲಿ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಸೇರಿದಂತೆ ಉಳಿದ ಷರತ್ತುಗಳ ಪಾಲನೆ, ಕ್ರಮಗಳ ಅಳವಡಿಕೆಯಲ್ಲಿ ಸರ್ಕಾರ ಮಾದರಿ ನಾಗರಿಕನಾಗಿ ನಡೆದುಕೊಳ್ಳಬೇಕು ಎಂದೂ ನ್ಯಾಯಾಲಯ ಹೇಳಿದೆ.

ವಾದ-ಪ್ರತಿವಾದ ಆಲಿಸಿದ ಪೀಠವು ಸರ್ಕಾರದ ಸುತ್ತೋಲೆಯಲ್ಲಿ ಹೊಸ ಷರತ್ತುಗಳನ್ನು ವಿಧಿಸಲಾಗಿಲ್ಲ. ಸುತ್ತೋಲೆಯಲ್ಲಿರುವುದು ಹೊಸ ನಿಯಮಗಳೂ ಅಲ್ಲ. ಆದರೆ, ಅವುಗಳನ್ನು ಪಾಲಿಸಲು ಅಥವಾ ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಬೇಕು. ಖಾಸಗಿ ಶಾಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿರುವುದರಿಂದ ಮಾನವೀಯ ಆಧಾರದಲ್ಲಿ ಪರಿಗಣಿಸಬೇಕು. ಮುಖ್ಯವಾಗಿ ಇದರಲ್ಲಿ ಆರ್ಥಿಕ ವಿಚಾರ ಒಳಗೊಂಡಿರುವುದರಿಂದ ಮಾನ್ಯತೆ ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಸೇರಿದಂತೆ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಿನ ಶೈಕ್ಷಣಿಕ ವರ್ಷ (2025-26)ದವರೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಅರ್ಜಿದಾರರ ಪರ ವಕೀಲ ಎಸ್ ಸುದರ್ಶನ್ ವಾದ ಮಂಡಿಸಿದ್ದರು.

Kannada Bar & Bench
kannada.barandbench.com