
ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ವಿಚಾರಣೆಗೆ ಆಸ್ಪದ ನೀಡದೆಯೇ ನೆಲಸಮ ಮಾಡುವ ʼಬುಲ್ಡೋಜರ್ ನ್ಯಾಯʼ ಪರಿಕಲ್ಪನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಬುಲ್ಡೋಜರ್ ನ್ಯಾಯ ಎಂಬುದು ಸಂವಿಧಾನವನ್ನು ಬುಲ್ಡೋಜರ್ ಮೂಲಕ ಕೆಡವಿದಂತೆ ಎಂದಿದ್ದಾರೆ.
ಪುಣೆಯ ಭಾರತಿ ವಿದ್ಯಾಪೀಠ ನೂತನ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ನ್ಯಾ. ಪಿ.ಎನ್. ಭಗವತಿ ಸ್ಮಾರಕ 13ನೇ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕುರಿತಾದ ಚರ್ಚಾ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಅಧಿಕಾರಿಗಳು ಆರೋಪಿಗಳ ಮನೆಗಳನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸಿ ನಂತರ ಆ ಕಟ್ಟಡಗಳನ್ನು ಅಕ್ರಮ ಎಂದು ಕರೆದು ಕ್ರಮವನ್ನು ಸಮರ್ಥಿಸಿಕೊಳ್ಳುವ ಅಭ್ಯಾಸವು "ವಿಚಲಿತಗೊಳಿಸುವಂಥದ್ದು ಮತ್ತು ಖೇದಕರ" ಎಂದು ಅವರು ಹೇಳಿದರು.
ನ್ಯಾ. ಭುಯಾನ್ ಅವರ ಭಾಷಣದ ಪ್ರಮುಖಾಂಶಗಳು
ಆಸ್ತಿಯನ್ನು ಕೆಡವಲು ಬುಲ್ಡೋಜರ್ ಬಳಸುವುದು ಸಂವಿಧಾನದ ಮೇಲೆ ಬುಲ್ಡೋಜರ್ ಚಲಾಯಿಸಿದಂತೆ.
ಇದು ಕಾನೂನಿನ ಆಳ್ವಿಕೆಯ ಪರಿಕಲ್ಪನೆಯನ್ನು ನಿರಾಕರಿಸುತ್ತದೆ.
ಅದಕ್ಕೆ ತಡೆ ನೀಡದೆ ಹೋದರೆ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯ ಸೌಧವನ್ನೇ ಅದು ಧ್ವಂಸ ಮಾಡುತ್ತದೆ.
ಆರೋಪಿ ಮಾಡಿದ ತಪ್ಪಿಗೆ ಬುಲ್ಡೋಜರ್ ನ್ಯಾಯದ ಮೂಲಕ ಆರೋಪಿಯ ಮನೆಯಲ್ಲಿರುವ ತಾಯಿ, ಸಹೋದರಿ, ಹೆಂಡತಿ ಮಕ್ಕಳಿಗೆ ಏಕೆ ಶಿಕ್ಷೆ ವಿಧಿಸಬೇಕು? ಅವರು ಮಾಡಿದ ತಪ್ಪೇನು?
ಅವರ ಮನೆ ಕೆಡವಿದರೆ, ಅವರು ಎಲ್ಲಿಗೆ ಹೋಗಬೇಕು?
ಯಾರಾದರೂ ಆರೋಪಿ ಅಥವಾ ಅಪರಾಧಿ ಎಂದ ಮಾತ್ರಕ್ಕೆ, ಅವರ ಮನೆ ಕೆಡವಬೇಕು ಎಂದರ್ಥವಲ್ಲ
ಭಾರತದ ಸುಪ್ರೀಂ ಕೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯ ಎಂದು ಹೇಳಿಕೊಂಡರೆ ಸಾಲದು ನ್ಯಾಯಾಂಗದಲ್ಲಿ ಸುಧಾರಣೆಗಳಾಗಬೇಕು.
ಹಿಂದಿನ ಕಾಲದ ಖಾಸಗಿ ಮಂಡಳಿಯಂತಹ ಸುಪ್ರೀಂ ಕೋರ್ಟ್‌ಗಿಂತಲೂ ಉನ್ನತವಾದ ಯಾವುದೇ ನ್ಯಾಯಾಲಯ ಇದ್ದಿದ್ದರೆ.. ಬಹುಶಃ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಮರು ವಿಮರ್ಶಿಸಬೇಕಾಗುತ್ತಿತ್ತು.
ಭಾರತೀಯ ನ್ಯಾಯಾಂಗದಲಿ ತಿದ್ದಿಕೊಳ್ಳಲು ಸಾಕಷ್ಟು ಅವಕಾಶವಿದೆ ಎಂದು ಬಲವಾಗಿ ನಂಬುತ್ತೇನೆ.
ಕಾನೂನು ವಿದ್ಯಾರ್ಥಿಗಳು ವಿಮರ್ಶಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳಬೇಕು.
ಇದಕ್ಕೂ ಮುನ್ನ ಪುಣೆ ವಕೀಲರ ಸಂಘ ನಗರದಲ್ಲಿ ಹಮ್ಮಿಕೊಂಡಿದ್ದ ನೂತನ ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾ. ಭುಯಾನ್ ಅವರು ನ್ಯಾಯಾಂಗ ಸ್ವತಂತ್ರವಾಗಿ ಉಳಿಯದ ಹೊರತು ಪ್ರಜಾಪ್ರಭುತ್ವ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಅದು ಸಾಧ್ಯವಾಗಲು ವಕೀಲ ವರ್ಗ ತನ್ನ ಪಾತ್ರ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನ್ಯಾಯಾಂಗ ಸ್ವಾತಂತ್ರ್ಯದೊಂದಿಗೆ ರಾಜಿ ಅಸಾಧ್ಯ ಎಂದ ಅವರು ಯಾವುದೇ ಇತ್ತಡ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ಇರಕೂಡದು ಎದು ಎಚ್ಚರಿಕೆ ನೀಡಿದರು. ಅಲ್ಲದೆ ವಿಚಾರಣಾ ನ್ಯಾಯಾಲಯಗಳು ನಿಜವಾದ ಕಾನೂನು ಹೋರಾಟ ನಡೆಯುವ ಸ್ಥಳಗಳು ಮತ್ತು ಸಾಮಾನ್ಯ ಜನರು ಮೊದಲ ಬಾರಿಗೆ ನ್ಯಾಯ ವ್ಯವಸ್ಥೆಯೊಂದಿಗೆ ಮುಖಾಮುಖಿಯಾಗುವ ಸ್ಥಳಗಳಾಗಿವೆ ಎಂದು ಅವರು ಒತ್ತಿ ಹೇಳಿದರು.
ನಾನು ಹಿಂತಿರುಗಲು ಸಾಧ್ಯವಾದರೆ, ವಿಚಾರಣಾ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ಹೆಚ್ಚಿನ ಸಮಯ ವಿನಿಯೋಗಿಸುತ್ತೇನೆ... ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳು ಸರಿಯಾಗಿವೆ, ಆದರೆ ಭಾರತದ ಹೆಚ್ಚಿನ ಮೊಕದ್ದಮೆಗಳು ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿವೆ ಎಂದು ಅವರು ವಿವರಿಸಿದರು.
ವಕೀಲ ವರ್ಗ ಉದ್ದೇಶಿಸಿ ಮಾತನಾಡಿದ ಅವರು ಕಾನೂನು ವೃತ್ತಿ 20/20 ಪಂದ್ಯವಲ್ಲ. ಇದು ಟೆಸ್ಟ್ ಪಂದ್ಯ. ಸ್ಪಿನ್ನರ್‌ಗಳು, ಬೌನ್ಸರ್‌ಗಳು ಮತ್ತು ವೇಗದ ಬೌಲರ್‌ಗಳನ್ನು ಎದುರಿಸಿ ದೀರ್ಘ ಇನ್ನಿಂಗ್ಸ್ ಆಡಲು ನೀವು ತಾಂತ್ರಿಕವಾಗಿ ಸದೃಢರಾಗಿರಬೇಕು ಎಂದು ಕರೆ ನೀಡಿದರು.