ಬುಲ್ಲಿ ಬಾಯ್‌ ಪ್ರಕರಣ: ಆರೋಪಿ ಮಯಾಂಕ್‌ ರಾವತ್‌ಗೆ ಕೋವಿಡ್‌ ಸೋಂಕು; ಕಪಾಳ ಮೋಕ್ಷ ಮಾಡಿದರು ಎಂದ ಶ್ವೇತಾ ಸಿಂಗ್‌

ಆರೋಪಿಗಳಾದ ಮಯಾಂಕ್‌ ಮತ್ತು ಶ್ವೇತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರ ಜಾಮೀನು ಮನವಿಗಳನ್ನು ಸೋಮವಾರ ನ್ಯಾಯಾಲಯ ವಿಚಾರಣೆ ನಡೆಸಲಿದೆ.
Bulli Bai case

Bulli Bai case

ಬುಲ್ಲಿ ಬಾಯ್‌ ಪ್ರಕರಣದ ಆರೋಪಿ ವಿಶಾಲ್‌ ಝಾ ಮತ್ತು ತನಿಖಾಧಿಕಾರಿ ಕೋವಿಡ್‌ ಸೋಂಕಿಗೆ ತುತ್ತಾದ ಬೆನ್ನಿಗೇ ಉತ್ತರಾಖಂಡ ಮೂಲದ ಮತ್ತೊಬ್ಬ ಆರೋಪಿ ಮಯಾಂಕ್‌ ರಾವತ್‌ಗೂ ಸೋಂಕು ತಗುಲಿದೆ ಎಂದು ಮುಂಬೈ ನ್ಯಾಯಾಲಯಕ್ಕೆ ಶುಕ್ರವಾರ ಮಾಹಿತಿ ನೀಡಲಾಗಿದೆ.

ರಾವತ್‌ ಅವರನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇಂದಿನವರೆಗೂ ಅವರು ಪೊಲೀಸ್‌ ವಶದಲ್ಲಿದ್ದರು. ಉತ್ತರಾಖಂಡದ 18 ವರ್ಷದ ಮತ್ತೊಬ್ಬ ಆರೋಪಿ ಶ್ವೇತಾ ಸಿಂಗ್‌ ಅವರು ವಿಚಾರಣೆಯ ವೇಳೆ ತನಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಯಾವುದೇ ರೀತಿಯ ಗಾಯವಾಗಿಲ್ಲ ಎಂದು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋಮಲ್‌ಸಿಂಗ್‌ ರಜಪೂತ್‌ ಅವರಿಗೆ ತಿಳಿಸಿದ್ದಾರೆ.

ಸುಲ್ಲಿ ಡೀಲ್ಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ನೀರಜ್‌ ಬಿಷ್ಣೋಯ್‌ ಎಂಬಾತ ಆರೋಪಿಗಳನ್ನು ಎಚ್ಚರಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಟ್ವಿಟರ್‌ ಖಾತೆಗಳನ್ನು ಡಿಲೀಟ್‌ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿತು.

Also Read
[ಬುಲ್ಲಿ ಬಾಯ್‌ ಪ್ರಕರಣ] ಆರೋಪಿಗಳಾದ ಶ್ವೇತಾ ಸಿಂಗ್‌, ಮಯಾಂಕ್‌ ರಾವತ್‌ ಜ.10ರವರೆಗೆ ಪೊಲೀಸ್‌ ಕಸ್ಟಡಿಗೆ

ಆರೋಪಿಗಳ ಪರ ವಕೀಲರು “ಆರೋಪಿಗಳು ತಮ್ಮ ಇಮೇಲ್‌ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳ ಮಾಹಿತಿ ನೀಡಿದ್ದಾರೆ. ಎಂಟು ದಿನಗಳಿಂದ ಅವರು ಕಸ್ಟಡಿಯಲ್ಲಿದ್ದಾರೆ” ಎಂದು ವಾದಿಸಿದ್ದು, ಮತ್ತೆ ವಶಕ್ಕೆ ನೀಡಬಾರದು ಎಂದು ಪೀಠವನ್ನು ಕೋರಿದರು. ಕೆಲಕಾಲ ವಾದ ಆಲಿಸಿದ ಪೀಠವು ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿದೆ.

ಜಾಮೀನು ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಲು ಪ್ರಾಸಿಕ್ಯೂಷನ್‌ಗೆ ಕಾಲಾವಕಾಶ ನೀಡಿರುವ ನ್ಯಾಯಾಲಯವು ಜಾಮೀನು ಮನವಿಯ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿದೆ. ಇಬ್ಬರೂ ಆರೋಪಿಗಳ ಜಾಮೀನು ಮನವಿಯ ಜೊತೆ ಮತ್ತೊಬ್ಬ ಆರೋಪಿ ಝಾ ಅರ್ಜಿಯನ್ನೂ ನ್ಯಾಯಾಲಯ ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com